ಉಡುಪಿ : ಸಾರ್ವಜನಿಕರ ದೂರಿಗೆ ಸ್ಪಂದಿಸಿದ ಜಿಲ್ಲಾಡಳಿತ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವಾಹನ ನಿಲುಗಡೆ ಆವರಣದಲ್ಲಿದ್ದ ಕಸ ಮತ್ತು ಪ್ಲಾಸ್ಟಿಕ್ ತ್ಯಾಜ್ಯವನ್ನು 24 ಗಂಟೆಯೊಳಗೆ ತೆರವುಗೊಳಿಸಿ ಪರಿಸರವನ್ನು ಸ್ವಚ್ಛಗೊಳಿಸಿದೆ.
ಇತ್ತೀಚೆಗೆ ಕೊಲ್ಲೂರು ದೇವಸ್ಥಾನಕ್ಕೆ ಆ. 4ರಂದು ಭೇಟಿ ನೀಡಿದ್ದ ಹೈಕೋರ್ಟ್ ವಕೀಲ ಕುಂಭಾಶಿಯ ಅಮಿತ್ ಶೆಟ್ಟಿ ಎಂಬುವವರು ದೇವಸ್ಥಾನದ ತೋಪ್ಲುಕಟ್ಟೆ ಬಳಿ ಇರುವ ವಾಹನ ಪಾರ್ಕಿಂಗ್ ಸ್ಥಳದಲ್ಲಿ ಪ್ಲಾಸ್ಟಿಕ್ ಬಾಟಲಿಗಳು, ತ್ಯಾಜ್ಯ ಮತ್ತು ಗಿಡಗಂಟಿಗಳು ತುಂಬಿರುವುದನ್ನು ಕಂಡು ಕಳವಳ ವ್ಯಕ್ತಪಡಿಸಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಮಾಹಿತಿ ಹಂಚಿಕೊಂಡಿದ್ದರು. ಜೊತೆಗೆ ಡಿಸಿ ಮತ್ತು ಸ್ಥಳಿಯ ಶಾಸಕರಿಗೆ ಟ್ಯಾಗ್ ಮಾಡಿದ್ದರು.
ಅಧಿಕಾರಿಗಳಿಂದ ತ್ವರಿತ ಸ್ಪಂದನೆ
ಈ ದೂರಿನ ಗಂಭೀರತೆಯನ್ನು ಮನಗಂಡ ಉಡುಪಿ ಜಿಲ್ಲಾಧಿಕಾರಿಗಳು ಹಾಗೂ ಬೈಂದೂರು ಕ್ಷೇತ್ರದ ಶಾಸಕರು ತಕ್ಷಣವೇ ಸೂಕ್ತ ಕ್ರಮಕ್ಕೆ ಸೂಚನೆ ನೀಡಿದ್ದರು. ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಆಗಸ್ಟ್ 5 ರಂದು ಕೊಲ್ಲೂರು ದೇವಸ್ಥಾನದ ಆಡಳಿತ ಮಂಡಳಿ ಪಾರ್ಕಿಂಗ್ ಆವರಣದಲ್ಲಿದ್ದ ಪ್ಲಾಸ್ಟಿಕ್ ಬಾಟಲಿಗಳು, ತ್ಯಾಜ್ಯ ಹಾಗೂ ಗಿಡಗಂಟಿಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿ ಸ್ಥಳವನ್ನು ಸ್ವಚ್ಛಗೊಳಿಸಿದ್ದಾರೆ.

