ಪ್ರವಾಸಿಗರ ಟ್ವೀಟ್‌ಗೆ ಜಿಲ್ಲಾಡಳಿತ ಸ್ಪಂದನೆ : ಕೊಲ್ಲೂರು ಪಾರ್ಕಿಂಗ್​ ಆವರಣ ಸ್ವಚ್ಛ

0
4

ಉಡುಪಿ : ಸಾರ್ವಜನಿಕರ ದೂರಿಗೆ ಸ್ಪಂದಿಸಿದ ಜಿಲ್ಲಾಡಳಿತ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವಾಹನ ನಿಲುಗಡೆ ಆವರಣದಲ್ಲಿದ್ದ ಕಸ ಮತ್ತು ಪ್ಲಾಸ್ಟಿಕ್​ ತ್ಯಾಜ್ಯವನ್ನು 24 ಗಂಟೆಯೊಳಗೆ ತೆರವುಗೊಳಿಸಿ ಪರಿಸರವನ್ನು ಸ್ವಚ್ಛಗೊಳಿಸಿದೆ.

ಇತ್ತೀಚೆಗೆ ಕೊಲ್ಲೂರು ದೇವಸ್ಥಾನಕ್ಕೆ ಆ. 4ರಂದು ಭೇಟಿ ನೀಡಿದ್ದ ಹೈಕೋರ್ಟ್​ ವಕೀಲ ಕುಂಭಾಶಿಯ ಅಮಿತ್​ ಶೆಟ್ಟಿ ಎಂಬುವವರು ದೇವಸ್ಥಾನದ ತೋಪ್ಲುಕಟ್ಟೆ ಬಳಿ ಇರುವ ವಾಹನ ಪಾರ್ಕಿಂಗ್​ ಸ್ಥಳದಲ್ಲಿ ಪ್ಲಾಸ್ಟಿಕ್​ ಬಾಟಲಿಗಳು, ತ್ಯಾಜ್ಯ ಮತ್ತು ಗಿಡಗಂಟಿಗಳು ತುಂಬಿರುವುದನ್ನು ಕಂಡು ಕಳವಳ ವ್ಯಕ್ತಪಡಿಸಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್​ ಮೂಲಕ ಮಾಹಿತಿ ಹಂಚಿಕೊಂಡಿದ್ದರು. ಜೊತೆಗೆ ಡಿಸಿ ಮತ್ತು ಸ್ಥಳಿಯ ಶಾಸಕರಿಗೆ ಟ್ಯಾಗ್​ ಮಾಡಿದ್ದರು.

ಅಧಿಕಾರಿಗಳಿಂದ ತ್ವರಿತ ಸ್ಪಂದನೆ

ಈ ದೂರಿನ ಗಂಭೀರತೆಯನ್ನು ಮನಗಂಡ ಉಡುಪಿ ಜಿಲ್ಲಾಧಿಕಾರಿಗಳು ಹಾಗೂ ಬೈಂದೂರು ಕ್ಷೇತ್ರದ ಶಾಸಕರು ತಕ್ಷಣವೇ ಸೂಕ್ತ ಕ್ರಮಕ್ಕೆ ಸೂಚನೆ ನೀಡಿದ್ದರು. ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಆಗಸ್ಟ್​ 5 ರಂದು ಕೊಲ್ಲೂರು ದೇವಸ್ಥಾನದ ಆಡಳಿತ ಮಂಡಳಿ ಪಾರ್ಕಿಂಗ್​ ಆವರಣದಲ್ಲಿದ್ದ ಪ್ಲಾಸ್ಟಿಕ್​ ಬಾಟಲಿಗಳು, ತ್ಯಾಜ್ಯ ಹಾಗೂ ಗಿಡಗಂಟಿಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿ ಸ್ಥಳವನ್ನು ಸ್ವಚ್ಛಗೊಳಿಸಿದ್ದಾರೆ.