ಇಂದು (ಆ.07) ರಂದು ತುಳು ಪರ್ಬ 2026

0
64

ಮಂಗಳೂರು : ಮಂಗಳೂರು ರಿಫೈನರಿ ಎಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ವತಿಯಿಂದ ಆಗಸ್ಟ್ 7, 2026ರಂದು ಸಂಜೆ 5.30 ಗಂಟೆಯಿಂದ ಎಂಆರ್‌ಪಿಎಲ್ ಎಂಪ್ಲಾಯೀಸ್ ರಿಕ್ರಿಯೇಷನ್ ಸೆಂಟರ್ (MERC) ನಲ್ಲಿ ‘ತುಳು ಪರ್ಬ 2026’ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲಾಗಿದೆ.

ತುಳುನಾಡಿನ ಶ್ರೀಮಂತ ಸಂಸ್ಕೃತಿ, ಪರಂಪರೆ, ಕಲೆ ಹಾಗೂ ಜನಪದ ವೈಭವವನ್ನು ಅನಾವರಣಗೊಳಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು, ಕಲಾವಿದರು ಹಾಗೂ ಸಮಾಜಸೇವಕರನ್ನು ಸನ್ಮಾನಿಸಲಾಗುತ್ತದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂಆರ್‌ಪಿಎಲ್ ವ್ಯವಸ್ಥಾಪಕ ನಿರ್ದೇಶಕ ಮುಂಡ್ಕೂರು ಶ್ಯಾಮ್ ಪ್ರಸಾದ್ ಕಾಮತ್ ವಹಿಸಲಿದ್ದು, ಗೌರವ ಅತಿಥಿಗಳಾಗಿ ನಿರ್ದೇಶಕರಾದ ನಂದಕುಮಾರ್ ವೇಲಾಯುಧನ್ ಪಿಳ್ಳೈ (ರಿಫೈನರಿ), ದೇವೇಂದ್ರ ಕುಮಾರ್ (ಹಣಕಾಸು) ಹಾಗೂ ಗ್ರೂಪ್ ಜನರಲ್ ಮ್ಯಾನೇಜರ್ (ಮಾನವ ಸಂಪನ್ಮೂಲ) ಪ್ರಶಾಂತ್ ಶಂಕರ್ ಪಡುವಲ್ ಭಾಗವಹಿಸಲಿದ್ದಾರೆ.

ಮುಖ್ಯ ಅತಿಥಿಯಾಗಿ ಭಂಡಾರಿ ಫೌಂಡೇಶನ್ ಟ್ರಸ್ಟಿ ಹಾಗೂ ಎಸ್‌ಸಿಇಎಂ ಆಡಳಿತ ಮಂಡಳಿ ಸದಸ್ಯ ಕೃಷ್ಣ ಹೆಗ್ಡೆ ಮಿಯಾರ್ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಜಾನಪದ ವಿದ್ವಾಂಸ ಹಾಗೂ ದೈವ ನರ್ತಕರಾದ ದಯಾನಂದ ಜಿ. ಕತ್ತಲ್ಸಾರ್, ರಾಷ್ಟ್ರೀಯ ಪ್ರಶಸ್ತಿ ವಿಜೇತೆ ಹಾಗೂ ತುಳು ಚಿತ್ರನಟಿ ರೂಪಾ ವರ್ಕಾಡಿ, ತುಳು ಚಿತ್ರನಟ ಪುಷ್ಪರಾಜ್ ಶೆಟ್ಟಿ ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ರಾಷ್ಟ್ರೀಯ ಪ್ರಶಸ್ತಿ ವಿಜೇತೆ ರೂಪಾ ವರ್ಕಾಡಿ, ಜಾನಪದ ವಿದ್ವಾಂಸ ದಯಾನಂದ ಜಿ. ಕತ್ತಲ್ಸಾರ್, ಯಕ್ಷಗಾನ ಕಲಾವಿದ ಉಮೇಶ್ ಕುಪ್ಪೆಪದವು, ರಾಷ್ಟ್ರೀಯ ಪ್ರಶಸ್ತಿ ವಿಜೇತೆ ಅತೀಶ್ ಶೆಟ್ಟಿ, ತುಳು ಸಂಘಟಕ ರೋಷನ್ ರೆನಾಲ್ಡ್, ಸಮಾಜಸೇವಕಿ ಹಾಗೂ ಸ್ನೇಹದೀಪ ಸಂಸ್ಥಾಪಕಿ ತಬಸ್ಸುಮ್ ಹಾಗೂ ಕಂಬಳ ಸಾಧಕ ಕೃತಿಕ್ ಗೌಡ ಕಕ್ಕೆಪದವು ಅವರನ್ನು ಸನ್ಮಾನಿಸಲಾಗುತ್ತದೆ.

ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಟೀಮ್ ನಂದಗೋಕುಲ ವತಿಯಿಂದ ತುಳು ನಾಟ್ಯ ವೈಭವ, ಟೀಮ್ ತ್ರೀ 2 ಒನ್ ವತಿಯಿಂದ ತುಳು ಸಂಸ್ಕೃತಿ ಮತ್ತು ತುಳು ವೈಭವ ಹಾಗೂ ಶ್ರೀ ಮೂಕಾಂಬಿಕಾ ಚೆಂಡೆ ತಂಡದಿಂದ ಭವ್ಯ ಚೆಂಡೆ ಪ್ರದರ್ಶನ ನಡೆಯಲಿದೆ.