ನವದೆಹಲಿ : ದೇಶದ ಮದ್ಯಪ್ರಿಯರಿಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಮಹತ್ವದ ಆಘಾತ ನೀಡಿದೆ. ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಓಲ್ಡ್ ಮಾಂಕ್, ಮ್ಯಾಕ್‌ಡೊವೆಲ್ಸ್, ಆಂಟಿಕ್ವಿಟಿ ಬ್ಲೂ, ರಾಯಲ್ ಚಾಲೆಂಜ್ ಸೇರಿದಂತೆ ಏಳು ಜನಪ್ರಿಯ ಮದ್ಯ ಬ್ರ್ಯಾಂಡ್‌ಗಳ ಕೆಲವು ಉತ್ಪನ್ನಗಳ ಮಾರಾಟಕ್ಕೆ ತಾತ್ಕಾಲಿಕ ನಿಷೇಧ ಹೇರಲಾಗಿದೆ.
FSSAI ಸ್ಪಷ್ಟಪಡಿಸಿರುವಂತೆ, ಈ ನಿಷೇಧವು ದೇಶಾದ್ಯಂತ ಆ ಬ್ರ್ಯಾಂಡ್‌ಗಳ ಎಲ್ಲ ಉತ್ಪನ್ನಗಳಿಗೆ ಅನ್ವಯಿಸುವುದಿಲ್ಲ. ನಿರ್ದಿಷ್ಟ ಉತ್ಪಾದನಾ ಘಟಕಗಳಲ್ಲಿ ತಯಾರಾದ ಮದ್ಯಗಳಿಗೆ ಮಾತ್ರ ಈ ಆದೇಶ ಅನ್ವಯವಾಗಲಿದೆ. ಇತರ ಘಟಕಗಳಲ್ಲಿ ತಯಾರಾಗಿರುವ ಅದೇ ಬ್ರ್ಯಾಂಡ್‌ನ ಮದ್ಯಗಳ ಮಾರಾಟ ಮುಂದುವರಿಯಲಿದೆ.
ಪ್ರಾಧಿಕಾರದ ತನಿಖೆಯಲ್ಲಿ ಕೆಲವು ಉತ್ಪನ್ನಗಳಲ್ಲಿ ಕೃತಕ ಸುವಾಸನೆ (Artificial Flavours) ಬಳಸಿರುವುದು, ನ್ಯೂಟ್ರಲ್ ಸ್ಪಿರಿಟ್‌ಗೆ ರಮ್ ಅಥವಾ ವಿಸ್ಕಿಯ ಸುವಾಸನೆ ಸೇರಿಸಿ ಅದನ್ನು ನೈಸರ್ಗಿಕ ರಮ್ ಅಥವಾ ವಿಸ್ಕಿಯಂತೆ ಬಿಂಬಿಸಿರುವುದು ಹಾಗೂ ಲೇಬಲ್‌ನಲ್ಲಿ ಗ್ರಾಹಕರನ್ನು ತಪ್ಪುದಾರಿಗೆಳೆಯುವ ಮಾಹಿತಿಯನ್ನು ನೀಡಿರುವುದು ಪತ್ತೆಯಾಗಿದೆ. ಇದು FSSAI ನಿಯಮಾವಳಿ-2018ರ ಉಲ್ಲಂಘನೆಯಾಗಿದೆ ಎಂದು ತಿಳಿಸಲಾಗಿದೆ.
ಉದಾಹರಣೆಗೆ, ಓಲ್ಡ್ ಮಾಂಕ್ XXX ಮೆಚ್ಯೂರ್ಡ್ ರಮ್ ಬಾಟಲಿಯಲ್ಲಿ ‘7 Years Old Blended’ ಎಂದು ನಮೂದಿಸಿದ್ದರೂ, ತನಿಖೆಯಲ್ಲಿ ಅದರಲ್ಲಿ ಸುಮಾರು 95% ನ್ಯೂಟ್ರಲ್ ಸ್ಪಿರಿಟ್ ಹಾಗೂ 5% ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮಾತ್ರ ಪಕ್ವವಾದ ರಮ್ ಇರುವುದಾಗಿ ವರದಿಯಾಗಿದೆ. ಈ ಕಾರಣದಿಂದ ಸಂಬಂಧಿತ ಉತ್ಪನ್ನಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ನಿಷೇಧಕ್ಕೆ ಒಳಗಾದ ಪ್ರಮುಖ ಬ್ರ್ಯಾಂಡ್‌ಗಳು
- ಓಲ್ಡ್ ಮಾಂಕ್ ದಿ ಲೆಜೆಂಡ್
- ಓಲ್ಡ್ ಮಾಂಕ್ ಗೋಲ್ಡ್ ರಿಸರ್ವ್
- ಓಲ್ಡ್ ಮಾಂಕ್ XXX ಮೆಚ್ಯೂರ್ಡ್ ರಮ್
- ಮ್ಯಾಕ್‌ಡೊವೆಲ್ಸ್ ನಂ.1 ರಮ್
- ಮ್ಯಾಕ್‌ಡೊವೆಲ್ಸ್ ನಂ.1 ಸೆಲೆಬ್ರೇಷನ್ XXX
- ಆಂಟಿಕ್ವಿಟಿ ಬ್ಲೂ ವಿಸ್ಕಿ
- ರಾಯಲ್ ಚಾಲೆಂಜ್ ವಿಸ್ಕಿ
- ಬ್ಯಾಗ್ ಪೈಪರ್ ಡಿಲಕ್ಸ್ ವಿಸ್ಕಿ
- ಓಲ್ಡ್ ಕ್ಯಾಸ್ಕ್
- ಸೆಂಟ್ರಲ್ ಪ್ರಾವಿನ್ಸ್ ವಿಸ್ಕಿ
FSSAI ಈ ಕ್ರಮವು ಗ್ರಾಹಕರ ಹಿತಾಸಕ್ತಿ ಹಾಗೂ ಉತ್ಪನ್ನಗಳ ಗುಣಮಟ್ಟ ಕಾಪಾಡುವ ಉದ್ದೇಶದಿಂದ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ. ಸಂಬಂಧಿತ ಕಂಪನಿಗಳು ನಿಯಮಾನುಸಾರ ಅಗತ್ಯ ತಿದ್ದುಪಡಿ ಕೈಗೊಂಡ ಬಳಿಕ ಮುಂದಿನ ಕ್ರಮಗಳ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರಾಧಿಕಾರ ಹೇಳಿದೆ.

