ಕುದ್ಮಾರು ಸಂಭ್ರಮ ಮುಂಗಾರು ಸಾಹಿತ್ಯ ಕಲರವ 2026 ಕವಿಗೋಷ್ಠಿ ಕಾರ್ಯಕ್ರಮ

0
16

ಬರಹದಿಂದ ಪರಿಚಯ ವಿಸ್ತಾರವಾಗುತ್ತದೆ : ಕುದ್ಮಾರು ಶಾಲಾ ಮುಖ್ಯಗುರು ಮಿನಿ ವರ್ಗೀಸ್ ಅಭಿಮತ

ಪುತ್ತೂರು : ದ. ಕ. ಜಿ. ಪಂ. ಸ. ಉ. ಹಿ. ಪ್ರಾಥಮಿಕ ಶಾಲೆ ಕುದ್ಮಾರು ಕಡಬ ಇದರ ನೇತೃತ್ವದಲ್ಲಿ, ಕನ್ನಡ ಸಾಹಿತ್ಯ ಪರಿಷತ್ತು ಕಡಬ ತಾಲೂಕು, ಎಸ್ ಡಿ ಎಂ ಸಿ ಕುದ್ಮಾರು ಶಾಲೆ ಇದರ ಸಹಕಾರದೊಂದಿಗೆ, ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಇದರ ಸಂಯೋಜನೆಯೊಂದಿಗೆ ಕುದ್ಮಾರು ಸಂಭ್ರಮ ಮುಂಗಾರು ಸಾಹಿತ್ಯ ಕಲರವ 2026 ಕವಿಗೋಷ್ಠಿ ಕಾರ್ಯಕ್ರಮ ದಿನಾಂಕ 06.08.2026ರಂದು ಕುದ್ಮಾರು ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ವಿಜೃಂಭಣೆಯಿಂದ ನಡೆಯಿತು.

ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಶಾಲಾಭಿವೃದ್ಧಿ ಸಮಿತಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ದೇವರಾಜ್ ನೂಜಿ ದೀಪದ ಬೆಳಕಿನಂತೆ ಉತ್ತಮ ಸಾಹಿತ್ಯದ ಪ್ರಕಾಶ ಕಾರ್ಯಕ್ರಮದಲ್ಲಿ ಬೀರಿ ಸುಂದರವಾಗಲಿ ಎಂದು ಶುಭಕೋರಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲಾ ಮುಖ್ಯಗುರುಗಳಾದ ಮಿನಿ ವರ್ಗೀಸ್‌ರವರು ಈ ಸಾಹಿತ್ಯ ಕಾರ್ಯಕ್ರಮ ನಮ್ಮ ಕನಸಿನ ಗೋಪುರ. ಬರಹದಿಂದ ಪರಿಚಯ ವಿಸ್ತಾರವಾಗುತ್ತದೆ. ಕವಿಗಳು ದೇಶದ ಶಕ್ತಿಗಳು. ಶಾಲೆಗಳಲ್ಲಿ ಆಟ ಪಾಠದ ಜೊತೆಗೆ ಮಕ್ಕಳ ಸಾಹಿತ್ಯ ಶಕ್ತಿಯನ್ನು ಬೆಳೆಸುವುದು ಅತ್ಯಗತ್ಯ ಅಲ್ಲದೇ ಕರ್ತವ್ಯವೂ ಹೌದು ಪುಟ್ಟ ಗ್ರಾಮವಾದ ಕುದ್ಮಾರು ಶಾಲೆಯ ಒಬ್ಬ ಮಗುವಾದರೂ ಸಾಹಿತ್ಯದೊಡನಾಟದಿಂದ ಮತ್ತು ಈ ಸಾಹಿತ್ಯ ಕಾರ್ಯಕ್ರಮದಿಂದ ಪ್ರಸಿದ್ಧಿಯಾಗಲಿ. ಹೀಗೆ ಹೆಸರು ಮಾಡಿದರೆ ನಮಗಷ್ಟೇ ಅಲ್ಲ ಕುದ್ಮಾರು ಊರಿಗೂ ಸಾರ್ಥಕ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತು ಕಡಬ ತಾಲೂಕು ಅಧ್ಯಕ್ಷರಾದ ಶ್ರೀ ಸೇಸಪ್ಪ ರೈಯವರು ಮಾತನಾಡಿ’ ಬರಹಗಾರರು, ಸಾಹಿತಿಗಳು ಬೆಳೆಯಬೇಕು.ತಮ್ಮ ಪ್ರತಿಭೆಯನ್ನು ಅಡಗಿಸದೇ ತಮ್ಮನ್ನು ತಾವಾಗಿಯೇ ಬೆಳೆಸಿಕೊಳ್ಳಬೇಕು.ಆಸಕ್ತಿ ಹವ್ಯಾಸವಾಗಿ ಜಗತ್ತಲ್ಲಿ ಕಂಗೊಳಿಸಬೇಕು ಎಂದು ಕವಿಗಳಿಗೆ ಹಾಗೂ ಮಕ್ಕಳಿಗೆ ಶುಭ ಹಾರೈಸಿದರು.

ಇನ್ನೋರ್ವ ಅತಿಥಿ ಸವಣೂರು ವ್ಯಾಪ್ತಿಯ ಸಮೂಹ ಸಂಪನ್ಮೂಲ ವ್ಯಕ್ತಿ ಜಯಂತ್ ವೈ ರವರು ಮಾತನಾಡಿ, ಹಲವಾರು ಕವಿ ಮನಸುಗಳ ಸಂಗಮದ ಕಾರ್ಯಕ್ರಮ ಶಾಲಾ ಮಕ್ಕಳಿಗೆ ಸ್ಫೂರ್ತಿಯಾಗಿ, ಮಕ್ಕಳ ಮನಸ್ಸಿನಲ್ಲಿ ಕವಿಗಳು, ಸಾಹಿತಿಗಳು ಹುಟ್ಟುವುದರಲ್ಲಿ ಸಂಶಯವಿಲ್ಲ. ಊರಿನ ಕವಿಗಳು ಪರವೂರಲ್ಲೂ, ರಾಜ್ಯದೆಲ್ಲೆಡೆಯಲ್ಲೂ ತಮ್ಮ ಪ್ರತಿಭೆಯನ್ನು ಬೆಳಗುವಂತಾಗಲಿ ಎಂದು ಶುಭ ಹಾರೈಸಿದರು.

ಸನ್ಮಾನ ಕಾರ್ಯಕ್ರಮ
ಕಾರ್ಯಕ್ರಮದಲ್ಲಿ ಮುಂಗಾರು ಸಾಹಿತ್ಯ ಕಲರವ ಸಂಯೋಜಕರಾದ ವೀಣಾ ಜಗದೀಶ್ ಕುದ್ಮಾರು, ಮುಂಗಾರು ಸಾಹಿತ್ಯ ಕಲರವ-2026 ಕವಿಗೋಷ್ಠಿ ಅಧ್ಯಕ್ಷರೂ ಯುವ ಸಾಹಿತಿ, ವಿಮರ್ಶಕರು ಆಗಿರುವ ಸುನೀತಾ ಶ್ರೀರಾಮ್ ಕೊಯಿಲ, ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಇದರ ಕಾರ್ಯಕ್ರಮ ಸಂಯೋಜಕರಾದ ನಾರಾಯಣ ಕುಂಬ್ರರವರನ್ನು ಗೌರವಿಸಿದ ಕ್ಷಣ ಕಾರ್ಯಕ್ರಮದಲ್ಲಿ ಸಾಕ್ಷಿಯಾಯಿತು.


ಸಂಭ್ರಮಿಸಿದ ಮುಂಗಾರು ಸಾಹಿತ್ಯ ಕಲರವ-2026

ಯುವ ಸಾಹಿತಿ, ವಿಮರ್ಶಕರೂ ಆಗಿರುವ ಸುನೀತಾ ಶ್ರೀರಾಮ್ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮದ ನಂತರ ಕವಿಗೋಷ್ಠಿ ನೆರವೇರಿತು. ಕವಿಗೋಷ್ಠಿಯಲ್ಲಿ ಕುದ್ಮಾರು ಶಾಲೆಯ ವಿದ್ಯಾರ್ಥಿಗಳಾದ, ಮನಸ್ವಿ, ಯಶ್ವಿತ್ ಕೆ. ಎಂ, ಪ್ರದೀಶ್ ಡಿ ಕೆ, ಧ್ರುವನ್, ಆಧ್ಯಾನ್ ಪಿ, ಶಿಶಿರ್ ಕೆ, ಮನ್ವಿತ್ ಬಿ, ಲಾಸ್ಯ ಯು, ಹರ್ಷಿತ ಬಿ, ಶ್ರಾವ್ಯ, ಯಶಸ್ವಿ ಪಿ ಸಿ, ಯಶ್ವಿ ಡಿ ಎನ್, ಜಿಲ್ಲೆಯ ಬೇರೆ ಬೇರೆ ತಾಲೂಕಿನ ಕವಿಗಳಾದ ಪ್ರಿಯಾ ನಾರಾವಿ, ಅಶ್ವಿಜ ಶ್ರೀಧರ್ ಬೆಳ್ತಂಗಡಿ, ಪೂರ್ಣಿಮಾ ಸಾಲೆತ್ತೂರು, ಅಕ್ಷತಾ ನಾಗನಕಜೆ, ಮನ್ಮಥ ಆಚಾರ್ ಕಡಬ, ಹರೀಶ್ ನಾಯಕ್ ಕಾಸರಗೋಡು, ಮುಹಮ್ಮದ್ ಅಜ್ಮಲ್ ಮುರ, ಸುರೇಶ್ ಕುಮಾರ್ ಚಾರ್ವಾಕ, ಜಗದೀಶ್ ಬಾರಿಕೆ, ನಮಿತಮಣಿ ಪಡ್ಡಾಯೂರು, ಹರ್ಷಿತ ಪಿ ಕಡೇಶಿವಾಲಯ, ವೀಣಾ ಜಗದೀಶ್, ಪೂರ್ಣಿಮಾ ಕೂಂಕ್ಯ, ಶ್ವೇತಾ ಜೆ ಕೊಯಿಕ್ಕುಡೆ ಭಾಗವಹಿಸಿದ್ದರು.

ಕವಿಗೋಷ್ಠಿ ಅಧ್ಯಕ್ಷರು ಹಾಗೂ ಲೇಖಕಿಯೂ ಆಗಿರುವ ಸುನೀತಾ ಶ್ರೀರಾಮ್ ಕೊಯಿಲ ಅವರು ಮಾತನಾಡಿ, ಇಂದು ಕವಿಗೋಷ್ಠಿಯಲ್ಲಿ ಬೇರೆ ಬೇರೆ ತಾಲೂಕಿನ ಕವಿವರ್ಯರು ಭಾಗವಹಿಸುವುದಲ್ಲದೆ ಶಾಲಾ ಮಕ್ಕಳು ತಮ್ಮ ಸ್ವರಚಿತ ಕವನವನ್ನು ವಾಚನ ಮಾಡಿದ್ದು ಬಹಳ ವಿಶೇಷ. ಯಾಕೆಂದರೆ ಮಕ್ಕಳು ಬರಹವನ್ನು ಆಸಕ್ತಿಯಿಂದ ಆಲಿಸುತ್ತಾರೆ ಮತ್ತು ರಚಿಸುತ್ತಾರೆ ಎಂದರೆ ಅದು ಸಾಹಿತ್ಯ ಲೋಕಕ್ಕೆ ಸಿಕ್ಕ ಜಯ ಅಲ್ಲವೇ. ಇಂದಿನ ಮಕ್ಕಳೇ ಸಾಹಿತ್ಯದ ಭವಿಷ್ಯ ಎಂದು ತಮ್ಮ ಅಧ್ಯಕ್ಷೀಯ ಮಾತುಗಳನ್ನಾಡುವುದರ ಜೊತೆಗೆ ಪ್ರತಿಯೊಬ್ಬರ ಕವನಗಳನ್ನೂ ವಿಮರ್ಶಿಸಿ ಶುಭಹಾರೈಸಿದರು.


ಸಮಾಜಸೇವೆಯೊಂದಿಗೆ ಹುಟ್ಟುಹಬ್ಬ ಆಚರಣೆ

ನನ್ನ ಶಾಲೆ ನನಗೆ ಹೆಮ್ಮೆ ಅನ್ನೋದು ಶಾಲಾ ವಿದ್ಯಾರ್ಥಿ ನಾಯಕಿ ಯಶ್ವಿ ಡಿ ಎನ್ ರವರ ಆಶಯದಂತೆ ತನ್ನ ಹುಟ್ಟುಹಬ್ಬದ ಪ್ರಯುಕ್ತ ಮರದ ಕುರ್ಚಿಯನ್ನು ಈ ಕಾರ್ಯಕ್ರಮದಲ್ಲಿ ಶಾಲೆಗೆ ಹಸ್ತಾಂತರಿಸಿ ಶಾಲೆಗೆ ಮಾದರಿಯಾದರು.

ಕಾರ್ಯಕ್ರಮವು ಶಾಲಾ ವಿದ್ಯಾರ್ಥಿಗಳಾದ ಯಶ್ವಿ ಡಿ ಎನ್, ತೃಷಾ ಎ ಮತ್ತು ಹರ್ಷಿತ ಬಿ ರವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡಿತು. ಶಾಲಾ ಶಿಕ್ಷಕಿ, ಕುದ್ಮಾರು ಸಂಭ್ರಮ ಮುಂಗಾರು ಸಾಹಿತ್ಯ ಕಲರವ -2026ರ ಕಾರ್ಯಕ್ರಮ ಸಂಯೋಜಕರಾದ ವೀಣಾ ಜಗದೀಶ್ ಸ್ವಾಗತಿಸಿ, ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಇದರ ಕಾರ್ಯಕ್ರಮ ಸಂಯೋಜಕರಾದ ನಾರಾಯಣ ಕುಂಬ್ರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜಗದೀಶ್ ಬಾರಿಕೆ, ಅಶ್ವಿಜ ಶ್ರೀಧರ್ ಬೆಳ್ತಂಗಡಿ ಮತ್ತು ನಮಿತಾಮಣಿ ಪಡ್ಡಾಯೂರು ವಿವಿಧ ಕಾರ್ಯಕ್ರಮ ನಿರ್ವಹಿಸಿ, ಶಾಲಾ ಶಿಕ್ಷಕಿ ವಿನುತಾ ಡಿ ವಂದಿಸಿದರು.