ನವದೆಹಲಿ: ಶ್ಯಾಂಪೂ, ಸೋಪು, ಟೂತ್‌ಪೇಸ್ಟ್ ಸೇರಿದಂತೆ ಸೌಂದರ್ಯವರ್ಧಕ ಮತ್ತು ವೈಯಕ್ತಿಕ ಆರೈಕೆ ಉತ್ಪನ್ನಗಳ ಪ್ಯಾಕೆಟ್‌ಗಳ ಮೇಲೆ ಉತ್ಪನ್ನವು ಸಸ್ಯಾಹಾರಿ ಅಥವಾ ಮಾಂಸಾಹಾರಿ ಮೂಲದ್ದೇ ಎಂಬುದನ್ನು ಸೂಚಿಸುವ ಚಿಹ್ನೆ ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಹೊಸ ನಿಯಮ ಜಾರಿಗೊಳಿಸಿದೆ.
ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯವು ಸೆಪ್ಟೆಂಬರ್ 21, 2026ರಂದು ಕಾನೂನು ಮಾಪನಶಾಸ್ತ್ರ (ಪ್ಯಾಕೇಜ್ ಮಾಡಿದ ಸರಕುಗಳು) ನಿಯಮಗಳು, 2011ಕ್ಕೆ ತಿದ್ದುಪಡಿ ಮಾಡಿದೆ. ಈ ತಿದ್ದುಪಡಿ ಅಧಿಕೃತ ಗೆಜೆಟ್‌ನಲ್ಲಿ ಪ್ರಕಟವಾದ ದಿನದಿಂದಲೇ ಜಾರಿಗೆ ಬಂದಿದೆ.
ಹೊಸ ನಿಯಮದಂತೆ, ಸೋಪು, ಶ್ಯಾಂಪೂ, ಟೂತ್‌ಪೇಸ್ಟ್, ಇತರ ಸೌಂದರ್ಯವರ್ಧಕಗಳು ಹಾಗೂ ವೈಯಕ್ತಿಕ ಬಳಕೆಯ ಉತ್ಪನ್ನಗಳ ಪ್ಯಾಕೆಟ್‌ನ ಮುಖ್ಯ ಪ್ರದರ್ಶನ ಭಾಗದ ಮೇಲ್ಭಾಗದಲ್ಲಿ ಈ ಚಿಹ್ನೆ ಇರಬೇಕು. ಸಸ್ಯಾಹಾರಿ ಮೂಲದ ಉತ್ಪನ್ನಗಳಿಗೆ ಹಸಿರು ಬಣ್ಣದ ಚುಕ್ಕೆ, ಸಸ್ಯಾಹಾರಿಯಲ್ಲದ ಮೂಲದ ಉತ್ಪನ್ನಗಳಿಗೆ ಕೆಂಪು ಅಥವಾ ಕಂದು ಬಣ್ಣದ ಚುಕ್ಕೆ ಬಳಸಬೇಕು.
ಕೆಲವು ಸೌಂದರ್ಯವರ್ಧಕ ಹಾಗೂ ವೈಯಕ್ತಿಕ ಆರೈಕೆ ಉತ್ಪನ್ನಗಳಲ್ಲಿ ಪ್ರಾಣಿ ಮೂಲದ ಪದಾರ್ಥಗಳನ್ನು ಬಳಸುವ ಸಾಧ್ಯತೆ ಇರುವುದರಿಂದ, ಉತ್ಪನ್ನದ ಸ್ವರೂಪದ ಬಗ್ಗೆ ಗ್ರಾಹಕರಿಗೆ ಸ್ಪಷ್ಟ ಮಾಹಿತಿ ನೀಡುವುದು ಈ ನಿಯಮದ ಉದ್ದೇಶವಾಗಿದೆ. ಗ್ರಾಹಕರು ತಮ್ಮ ಆಹಾರ ಪದ್ಧತಿ, ಧಾರ್ಮಿಕ ನಂಬಿಕೆ ಅಥವಾ ವೈಯಕ್ತಿಕ ಆದ್ಯತೆಗಳಿಗೆ ಅನುಗುಣವಾಗಿ ಉತ್ಪನ್ನ ಆಯ್ಕೆ ಮಾಡಿಕೊಳ್ಳಲು ಇದರಿಂದ ನೆರವಾಗಲಿದೆ.
ಈ ರೀತಿಯ ಗುರುತು ನೀಡುವ ಪ್ರಸ್ತಾವನೆ ಈ ಹಿಂದೆಯೇ ಚರ್ಚೆಯಲ್ಲಿತ್ತು. 2018ರಲ್ಲಿ ಔಷಧ ತಾಂತ್ರಿಕ ಸಲಹಾ ಮಂಡಳಿ ಸೋಪು, ಶ್ಯಾಂಪೂ, ಟೂತ್‌ಪೇಸ್ಟ್ ಹಾಗೂ ಇತರ ಸೌಂದರ್ಯವರ್ಧಕಗಳ ಮೇಲೆ ಹಸಿರು ಅಥವಾ ಕೆಂಪು/ಕಂದು ಚುಕ್ಕೆ ಸೂಚಿಸುವ ಪ್ರಸ್ತಾವನೆಗೆ ಒಪ್ಪಿಗೆ ನೀಡಿತ್ತು.

