ಸಮಕಾಲೀನ ಭಾರತದಲ್ಲಿ ಅಸ್ಪೃಶ್ಯತೆ ಕುರಿತು ಡಾ. ಪ್ರೀತಿ ಲೋಲಾಕ್ಷ ನಾಗವೇಣಿ ಕೃತಿ ಬಿಡುಗಡೆ

0
5

ಮಂಗಳೂರು : ಮಂಗಳೂರು ಮೂಲದ ಕಾನೂನು ತಜ್ಞೆ ಹಾಗೂ ಸಂಶೋಧಕಿ ಡಾ. ಪ್ರೀತಿ ಲೋಲಾಕ್ಷ ನಾಗವೇಣಿ ಅವರ ‘Untouchability in 21st Century India’ ಕೃತಿಯನ್ನು ಅಂತರರಾಷ್ಟ್ರೀಯ ಪ್ರಕಾಶನ ಸಂಸ್ಥೆ Routledge ಪ್ರಕಟಿಸಿ ಬಿಡುಗಡೆ ಮಾಡಿದೆ. ಆಧುನಿಕ ಭಾರತದಲ್ಲಿ ಅಸ್ಪೃಶ್ಯತೆ ಹಾಗೂ ಜಾತಿ ಆಧಾರಿತ ತಾರತಮ್ಯದ ಮುಂದುವರಿದ ಸ್ವರೂಪಗಳನ್ನು ಕಾನೂನು ಮತ್ತು ಮಾನವ ಹಕ್ಕುಗಳ ದೃಷ್ಟಿಕೋನದಿಂದ ವಿಶ್ಲೇಷಿಸಿರುವ ಈ ಕೃತಿ ಮಹತ್ವದ ಸಂಶೋಧನಾ ಕೊಡುಗೆಯಾಗಿ ಗುರುತಿಸಿಕೊಂಡಿದೆ.

ಕೃತಿಯಲ್ಲಿ ಮುಖ್ಯವಾಗಿ ಮ್ಯಾನುಯಲ್ ಸ್ಕ್ಯಾವೆಂಜಿಂಗ್ (ಮಾನವ ಮಲ ಸ್ವಚ್ಛತಾ ಕೆಲಸ) ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿರುವ ಜಾತಿ ಆಧಾರಿತ ತಾರತಮ್ಯ ಎಂಬ ಎರಡು ಪ್ರಮುಖ ವಿಚಾರಗಳನ್ನು ವಿಶ್ಲೇಷಿಸಲಾಗಿದೆ. ಸಂವಿಧಾನಾತ್ಮಕ ಹಕ್ಕುಗಳು ಹಾಗೂ ಕಾನೂನು ರಕ್ಷಣೆಗಳಿದ್ದರೂ ಅಸ್ಪೃಶ್ಯತೆ ಭಾರತದಲ್ಲಿ ಸಂಪೂರ್ಣವಾಗಿ ನಿರ್ಮೂಲವಾಗಿಲ್ಲ ಎಂಬುದನ್ನು ಲೇಖಕಿ ಸಂಶೋಧನೆಯ ಮೂಲಕ ವಿವರಿಸಿದ್ದಾರೆ.

ವ್ಯಾಪಕ ಕಾನೂನು, ಸಾಮಾಜಿಕ ಹಾಗೂ ಮಾನವ ಹಕ್ಕುಗಳ ಸಂಶೋಧನೆಯ ಜೊತೆಗೆ ವಿವಿಧ ವರ್ಗದ ಜನರ ಸಂದರ್ಶನಗಳನ್ನು ಆಧರಿಸಿ ಕೃತಿಯನ್ನು ರೂಪಿಸಲಾಗಿದೆ. ಸಮಾಜದ ಅತ್ಯಂತ ಹಿಂದುಳಿದ ಹಾಗೂ ಆರ್ಥಿಕವಾಗಿ ದುರ್ಬಲ ದಲಿತ ಸಮುದಾಯಗಳ ಮೇಲೆ ಪರಿಣಾಮ ಬೀರುವ ಮ್ಯಾನುಯಲ್ ಸ್ಕ್ಯಾವೆಂಜಿಂಗ್‌ನಿಂದ ಹಿಡಿದು, ಉನ್ನತ ಶಿಕ್ಷಣ ಪಡೆಯುತ್ತಿರುವ ದಲಿತ ವಿದ್ಯಾರ್ಥಿಗಳು ಹಾಗೂ ಶಿಕ್ಷಣ ತಜ್ಞರು ಎದುರಿಸುವ ಸೂಕ್ಷ್ಮ ತಾರತಮ್ಯದವರೆಗೆ ಹಲವು ಆಯಾಮಗಳನ್ನು ಕೃತಿಯಲ್ಲಿ ದಾಖಲಿಸಲಾಗಿದೆ.

ಅಂತರರಾಷ್ಟ್ರೀಯ ಮಾನವ ಹಕ್ಕುಗಳ ದೃಷ್ಟಿಕೋನ

ಅಸ್ಪೃಶ್ಯತೆಯನ್ನು ಸಾಮಾಜಿಕ, ಆರ್ಥಿಕ, ರಾಜಕೀಯ ಅಥವಾ ಸಾಂಸ್ಕೃತಿಕ ಸಮಸ್ಯೆಯಾಗಿ ಮಾತ್ರ ಪರಿಗಣಿಸದೆ ಕಾನೂನು ಹಾಗೂ ಮಾನವ ಹಕ್ಕುಗಳ ಸಮಸ್ಯೆಯಾಗಿಯೂ ನೋಡಬೇಕು ಎಂದು ಡಾ. ಪ್ರೀತಿ ತಮ್ಮ ಕೃತಿಯಲ್ಲಿ ಪ್ರತಿಪಾದಿಸಿದ್ದಾರೆ. ಅಸ್ಪೃಶ್ಯತೆ ನಿರ್ಮೂಲನೆಗೆ ಅಸ್ತಿತ್ವದಲ್ಲಿರುವ ಕಾನೂನು ವ್ಯವಸ್ಥೆಗಳ ಮಿತಿಗಳನ್ನೂ ಅವರು ವಿಶ್ಲೇಷಿಸಿದ್ದಾರೆ.

ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಡಾ. ಪ್ರೀತಿ ಅವರ ಶೈಕ್ಷಣಿಕ ಹಾಗೂ ನೀತಿ ಸಂಬಂಧಿತ ಕಾರ್ಯಗಳು ಗಮನ ಸೆಳೆದಿವೆ. ವಿಶ್ವಸಂಸ್ಥೆಯ ವಿವಿಧ ಮಾನವ ಹಕ್ಕುಗಳ ವ್ಯವಸ್ಥೆಗಳು, ಯುನೈಟೆಡ್ ಕಿಂಗ್‌ಡಮ್ ಸಂಸತ್ತು ಹಾಗೂ ನ್ಯೂಜಿಲೆಂಡ್ ಸಂಸತ್ತಿನ ಚರ್ಚೆಗಳಿಗೆ ಅವರ ಮೌಖಿಕ ಮತ್ತು ಲಿಖಿತ ಕೊಡುಗೆಗಳಿವೆ. UN CEDAW ಮುಂದೆ ಮ್ಯಾನುಯಲ್ ಸ್ಕ್ಯಾವೆಂಜರ್‌ಗಳು ಎದುರಿಸುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಗಳ ಕುರಿತು ಅವರು ಮೌಖಿಕ ಹೇಳಿಕೆಯನ್ನೂ ನೀಡಿದ್ದಾರೆ.

19 ಸಂಶೋಧನಾ ಲೇಖನ, 5 ಪುಸ್ತಕ ಅಧ್ಯಾಯ

ಕಾನೂನು ಕ್ಷೇತ್ರದ ಶೈಕ್ಷಣಿಕ ವಲಯದಲ್ಲಿ ಗುರುತಿಸಿಕೊಂಡಿರುವ ಡಾ. ಪ್ರೀತಿ ಅವರು ಇದುವರೆಗೆ 19 ಪೀರ್-ರಿವ್ಯೂಡ್ ಸಂಶೋಧನಾ ಲೇಖನಗಳು ಹಾಗೂ ಐದು ಪೀರ್-ರಿವ್ಯೂಡ್ ಪುಸ್ತಕ ಅಧ್ಯಾಯಗಳನ್ನು ಅಂತಾರಾಷ್ಟ್ರೀಯವಾಗಿ ಗುರುತಿಸಿಕೊಂಡಿರುವ ಪ್ರಕಾಶಕರ ಮೂಲಕ ಪ್ರಕಟಿಸಿದ್ದಾರೆ. ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್ ಪ್ರಕಟಿಸಿರುವ ಅಂತರರಾಷ್ಟ್ರೀಯ ಆರೋಗ್ಯ ನಿಯಮಾವಳಿಗಳ ಕುರಿತ ಅವರ ಅಧ್ಯಾಯವು ವಿಶ್ವ ಆರೋಗ್ಯ ಸಂಸ್ಥೆಯ COVID-19 Research Databaseನಲ್ಲಿ ದಾಖಲಾಗಿದೆ.

ಅವರ ಎರಡು ಸಂಶೋಧನಾ ಲೇಖನಗಳು ಮತ್ತು ಎರಡು ಪುಸ್ತಕ ಅಧ್ಯಾಯಗಳು ಜಿನೀವಾದಲ್ಲಿರುವ ವಿಶ್ವಸಂಸ್ಥೆಯ ಕಚೇರಿ ಗ್ರಂಥಾಲಯದ ಕ್ಯಾಟಲಾಗ್‌ನಲ್ಲಿ ಸ್ಥಾನ ಪಡೆದಿವೆ. ಇದೀಗ ‘Untouchability in 21st Century India’ ಕೃತಿಯೂ ಲಂಡನ್‌ನ British Library ಕ್ಯಾಟಲಾಗ್‌ನಲ್ಲಿ ದಾಖಲಾಗಿದೆ.

ಜಾತಿ ತಾರತಮ್ಯ, ಮಾನವ ಹಕ್ಕುಗಳು ಹಾಗೂ ಸಮಾನತೆಯ ಕುರಿತ ಸಮಕಾಲೀನ ಕಾನೂನು ಅಧ್ಯಯನಕ್ಕೆ ಈ ಕೃತಿ ಮಹತ್ವದ ಕೊಡುಗೆಯಾಗಿದ್ದು, ಶಿಕ್ಷಣ ತಜ್ಞರು, ನೀತಿ ನಿರೂಪಕರು, ಕಾನೂನು ತಜ್ಞರು, ಮಾನವ ಹಕ್ಕುಗಳ ಸಂಘಟನೆಗಳು ಹಾಗೂ ಸಂಶೋಧಕರಿಗೆ ಉಪಯುಕ್ತವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಕೃತಿ Routledge ಮತ್ತು Amazon India ಸೇರಿದಂತೆ ಅಧಿಕೃತ ವೇದಿಕೆಗಳಲ್ಲಿ ಲಭ್ಯವಿದೆ. Routledgeನಲ್ಲಿ ಕೃತಿ ವಿವರಗಳು