ಆ.13ರ ಕರ್ನಾಟಕ ಬಂದ್‌ಗೆ ಅನಿಶ್ಚಿತತೆ : ಹಲವು ಸಂಘಟನೆಗಳು ಬೆಂಬಲದಿಂದ ಹಿಂದೆ ಸರಿಯುವ ಸೂಚನೆ

0
57

ಬೆಂಗಳೂರು : ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ವಿರೋಧಿಸಿ ಆಗಸ್ಟ್ 13ರಂದು ಕರೆ ನೀಡಲಾಗಿರುವ ಕರ್ನಾಟಕ ಬಂದ್‌ಗೆ ಇದೀಗ ಅನಿಶ್ಚಿತತೆ ಎದುರಾಗಿದೆ. ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸದ್ಯ ಕಾವೇರಿ ಜಲ ವಿವಾದ ತೀವ್ರ ಸ್ವರೂಪದಲ್ಲಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದು, ಈ ಕಾರಣದಿಂದ ಕೆಲವು ಕನ್ನಡಪರ ಹಾಗೂ ರೈತಪರ ಸಂಘಟನೆಗಳು ಬಂದ್‌ಗೆ ನೀಡಿದ್ದ ಬೆಂಬಲವನ್ನು ಮರುಪರಿಶೀಲಿಸುತ್ತಿವೆ.

ವಾಟಾಳ್ ನಾಗರಾಜ್ ಬಣದೊಂದಿಗೆ ಗುರುತಿಸಿಕೊಂಡಿರುವ ಸಾರಾ ಗೋವಿಂದ್ ಅವರು ಬಂದ್‌ಗೆ ತಮ್ಮ ಬೆಂಬಲವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡ ಕೂಡ ಬಂದ್‌ಗೆ ಬೆಂಬಲ ನೀಡುವುದಿಲ್ಲ ಎಂದು ಈಗಾಗಲೇ ಘೋಷಿಸಿದ್ದಾರೆ. ಪ್ರವೀಣ್ ಶೆಟ್ಟಿ ಬಣವೂ ಬಂದ್‌ನಿಂದ ಹಿಂದೆ ಸರಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಓಲಾ–ಉಬರ್ ಸಂಘಟನೆಯಿಂದಲೂ ಬೆಂಬಲವಿಲ್ಲ

ಕರ್ನಾಟಕ ಬಂದ್‌ಗೆ ಓಲಾ–ಉಬರ್ ಅಸೋಸಿಯೇಷನ್‌ನಿಂದಲೂ ಇದುವರೆಗೆ ಯಾವುದೇ ಬೆಂಬಲ ವ್ಯಕ್ತವಾಗಿಲ್ಲ. ಬಂದ್‌ನಿಂದ ರಾಜ್ಯದ ಆರ್ಥಿಕ ಚಟುವಟಿಕೆಗಳಿಗೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದ್ದು, ದಿನಗೂಲಿ ಕಾರ್ಮಿಕರು, ರೈತರು, ಬೀದಿ ಬದಿ ವ್ಯಾಪಾರಿಗಳು, ಸಣ್ಣ ವ್ಯಾಪಾರಸ್ಥರು ಹಾಗೂ ಹೋಟೆಲ್ ಉದ್ಯಮವನ್ನು ಅವಲಂಬಿಸಿರುವವರಿಗೆ ತೊಂದರೆಯಾಗಬಹುದು ಎಂಬ ಅಭಿಪ್ರಾಯ ಕೇಳಿಬಂದಿದೆ.

ಬಂದ್‌ನಿಂದ ಸಾರ್ವಜನಿಕ ಜೀವನಕ್ಕೆ ಅಡಚಣೆಯಾಗುವುದರ ಜತೆಗೆ ಆರ್ಥಿಕ ನಷ್ಟವೂ ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದಲ್ಲಿಯೂ ಬಂದ್‌ ಬಗ್ಗೆ ಪರ-ವಿರೋಧದ ಚರ್ಚೆ ನಡೆಯುತ್ತಿದೆ.

ಬಂದ್ ರದ್ದಾಗುವ ಸಾಧ್ಯತೆ?

ಆಗಸ್ಟ್ 13ರ ಬಂದ್‌ಗೆ ಕರೆ ನೀಡಿದ್ದ ಪ್ರಮುಖ ಸಂಘಟನೆಗಳ ಪೈಕಿ ಕೆಲವರು ಬೆಂಬಲದಿಂದ ಹಿಂದೆ ಸರಿಯುತ್ತಿರುವ ಹಿನ್ನೆಲೆಯಲ್ಲಿ ಬಂದ್‌ನ ತೀವ್ರತೆ ಕಡಿಮೆಯಾಗುವ ಸಾಧ್ಯತೆ ಇದೆ. ಕೆಲವು ಸಂಘಟನೆಗಳು ಸಂಪೂರ್ಣವಾಗಿ ಹಿಂದೆ ಸರಿದರೆ ಬಂದ್ ರದ್ದಾಗುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.

ಆದರೆ ಆಗಸ್ಟ್ 13ರಂದು ಬಂದ್ ನಡೆಯಲಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಸಂಘಟನೆಗಳಿಂದ ಇನ್ನೂ ಅಧಿಕೃತ ಅಂತಿಮ ನಿರ್ಧಾರ ಹೊರಬಿದ್ದಿಲ್ಲ. ಹೀಗಾಗಿ ಬಂದ್‌ ಕುರಿತು ಮುಂದಿನ ದಿನಗಳಲ್ಲಿ ನಡೆಯುವ ಸಭೆಗಳು ಹಾಗೂ ಸಂಘಟನೆಗಳ ನಿರ್ಧಾರ ಕುತೂಹಲ ಮೂಡಿಸಿದೆ.