ಅಜೆಕಾರು ಕಲಾಭಿಮಾನಿ ಬಳಗದ ರಜತಪರ್ವ: ಮುಂಬಯಿ ಯಕ್ಷಗಾನ ಸಮ್ಮೇಳನ – 2026

0
7
ಸಮ್ಮೇಳನದ ಲಾಂಛನ

ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ

ಮಹತ್ವದ ಗೋಷ್ಠಿಗಳು ಮತ್ತು ಇತರ ಕಲಾಪಗಳು

ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಇದರ ‘ರಜತ ಪರ್ವ’ ಸಂದರ್ಭದಲ್ಲಿ ಆಯೋಜಿಸಿರುವ ಮುಂಬೈ ಯಕ್ಷಗಾನ ಸಮ್ಮೇಳನದಲ್ಲಿ ಮಹತ್ವದ ಎಂಟು ವಿಚಾರಗೋಷ್ಠಿಗಳನ್ನು ಏರ್ಪಡಿಸಲಾಗಿದೆ. ಇದು ಯಕ್ಷಗಾನ ಇತಿಹಾಸದಲ್ಲೊಂದು ಮೈಲಿಗಲ್ಲು. 2026 ಅಕ್ಟೋಬರ್ 3 ಮತ್ತು 4ರಂದು ಮುಂಬೈ ಕುರ್ಲಾದ ಬಂಟರ ಭವನದಲ್ಲಿ ನಿರ್ಮಿಸಲಾಗುವ ದಿ| ಕಲ್ಲಾಡಿ ವಿಠಲ ಶೆಟ್ಟಿ ಪ್ರಾಂಗಣದಲ್ಲಿ ಜರಗುವ ಈ ಸಮ್ಮೇಳನದಲ್ಲಿ ಮಹತ್ವದ ಎಂಟು ವಿಚಾರಗೋಷ್ಠಿಗಳನ್ನು ಏರ್ಪಡಿಸಲಾಗಿದೆ. ಇದರಲ್ಲಿ ಯಕ್ಷಗಾನದ ವಿವಿಧ ಆಯಾಮಗಳ ಬಗ್ಗೆ ವಿಸ್ತೃತ ಚರ್ಚೆಗಳು ನಡೆಯಲಿದ್ದು ಹಲವು ಮಂದಿ ಸಂಪನ್ಮೂಲ ವ್ಯಕ್ತಿಗಳು ಮತ್ತು ವಿದ್ವಾಂಸರು ಭಾಗವಹಿಸಿ ವಿಚಾರ ಮಂಡಿಸುವರು. ಬಳಗದ ಅಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ನೇತೃತ್ವದಲ್ಲಿ ಈಗಾಗಲೇ ಕಾರ್ಯಕ್ರಮಗಳ ರೂಪುರೇಷೆ ಸಿದ್ದವಾಗಿದೆ.

ಸಮ್ಮೇಳನಾಧ್ಯಕ್ಷರು

ಗೋಷ್ಠಿ ೧. ಮುಂಬೈ ಯಕ್ಷಗಾನ – ಒಂದು ಅವಲೋಕನ:

ಮುಂಬಯಿ ಮಹಾನಗರದಲ್ಲಿ ಯಕ್ಷಗಾನೀಯ ಚಟುವಟಿಕೆಗಳಿಗೆ ಒಂದು ಶತಮಾನಕ್ಕೂ ಹೆಚ್ಚಿನ ಇತಿಹಾಸವಿದೆ. ಈ ಬಗ್ಗೆ ಆಳವಾದ ಸಂಶೋಧನೆ ನಡೆಸಿ ಕೃತಿ ರಚನೆ ಮಾಡಿರುವ ಡಾ. ವೈ.ವಿ. ಮಧುಸೂಧನ ರಾವ್ ಅವರು ಸಮ್ಮೇಳನದ ಮೊದಲ ಗೋಷ್ಠಿಯಲ್ಲಿ ವಿಚಾರ ಮಾಡಿಸುವರು. ‘ಮುಂಬಯಿ ಯಕ್ಷಗಾನ – ಒಂದು ಅವಲೋಕನ’ ಎಂಬ ಈ ಗೋಷ್ಠಿಯಲ್ಲಿ ಯಕ್ಷಗಾನ ಕಲಾವಿದೆ ಗೀತಾ ಎಲ್. ಭಟ್ ಮತ್ತು ಲೇಖಕ, ಯಕ್ಷಗಾನ ಅರ್ಥಧಾರಿ ಕೋಲ್ಯಾರು ರಾಜು ಶೆಟ್ಟಿ ಪ್ರತಿಕ್ರಿಯೆ ನೀಡುವರು. ಸಮ್ಮೇಳನದ ಉದ್ಘಾಟನಾ ಸಮಾರಂಭದ ಬಳಿಕ ಈ ಗೋಷ್ಠಿ ನಡೆಯಲಿದೆ.

೨. ಮಹಿಳಾ ಮತ್ತು ಮಕ್ಕಳ ಯಕ್ಷಗಾನ:

ಅಕ್ಟೋಬರ 3ರಂದು ನಡೆಯಲಿರುವ ಎರಡನೇ ವಿಚಾರಗೋಷ್ಠಿಯಲ್ಲಿ ಮಹಿಳಾ ಮತ್ತು ಮಕ್ಕಳ ಯಕ್ಷಗಾನದ ಬಗ್ಗೆ ಚಿಂತನೆ ನಡೆಯಲಿದೆ ತುಮಕೂರು ವಿದ್ಯಾನಿಧಿ ಪದವಿ ಪೂರ್ವ ಕಾಲೇಜಿನ ಪ್ರಾಧ್ಯಾಪಕಿ ಡಾ.ಆರತಿ ಪಟ್ರಮೆ ‘ಮಹಿಳಾ ಯಕ್ಷಗಾನ’ದ ಬಗ್ಗೆ ಪ್ರಬಂಧ ಮಂಡಿಸುವರು. ಶಿಕ್ಷಕ ಮತ್ತು ಯಕ್ಷಗಾನ ನಿರ್ದೇಶಕ ದೀವಿತ್ ಎಸ್. ಕೆ. ಪೆರಾಡಿ ‘ಮಕ್ಕಳ ಯಕ್ಷಗಾನ’ದ ಬಗ್ಗೆ ಮಾತನಾಡುವರು.

೩. ಅರ್ಥಗಾರಿಕೆ: ಸ್ವರೂಪ ಮತ್ತು ವಿಸ್ತರಣೆ:

ಪ್ರದರ್ಶನ ಕಲೆಯಾದ ಯಕ್ಷಗಾನದ ಆಶು ಸಂಭಾಷಣೆಗೆ ಪ್ರಬಲವಾದ ಸಾಹಿತ್ಯಿಕ ಹಿನ್ನೆಲೆಯಿದೆ. ಕಲಾವಿದರ ಅರ್ಥಗಾರಿಕೆಯಲ್ಲಿ ಶಾಸ್ತ್ರ – ಪುರಾಣಗಳ ಮರು ವಿಮರ್ಶೆ ನಡೆಯುವುದನ್ನು ಮಾತಿನ ಮಂಟಪವಾದ ತಾಳಮದ್ದಳೆಯಲ್ಲಿ ಕಾಣಬಹುದು. ಅದಕ್ಕಾಗಿಯೇ ‘ಅರ್ಥಗಾರಿಕೆ: ಸ್ವರೂಪ ಮತ್ತು ವಿಸ್ತರಣೆ’ ಎಂಬ ಮೂರನೇ ಗೋಷ್ಠಿಯಲ್ಲಿ ಈ ಬಗ್ಗೆ ಚಿಂತನೆ ನಡೆಯಲಿದೆ. ಹಿರಿಯ ಅರ್ಥಧಾರಿಗಳಾದ ಜಬ್ಬಾರ್ ಸಮೋ ಸಂಪಾಜೆ ಮತ್ತು ಗಣರಾಜ ಕುಂಬಳೆ ಈ ಬಗ್ಗೆ ತಮ್ಮ ವಿಚಾರಗಳನ್ನು ಮಂಡಿಸುವರು. ಎಂ.ಕೆ. ರಮೇಶ ಆಚಾರ್ಯ ಮತ್ತು ಸದಾಶಿವ ಆಳ್ವ ತಲಪಾಡಿ ಪ್ರತಿಕ್ರಿಯೆ ನೀಡುವರು.

೪. ಯಕ್ಷಗಾನ ಕವಿ ಸಮಯ:

ಸಮ್ಮೇಳನದ ಎರಡನೇ ದಿನ ಸಾಹಿತ್ಯ ಸಮ್ಮೇಳನಗಳ ಮಾದರಿಯಲ್ಲಿ ವಿಶೇಷವಾದ ಯಕ್ಷಗಾನ ಕವಿಗೋಷ್ಠಿಯೊಂದನ್ನು ಏರ್ಪಡಿಸಲಾಗಿದೆ. ಹಿರಿಯ ಸಂಶೋಧಕ ಮತ್ತು ಪ್ರಸಂಗ ಕರ್ತರಾದ ಡಾ.ಕೆ.ಎಂ.ರಾಘವ ನಂಬಿಯಾರ್ ಅವರ ಉಪಸ್ಥಿತಿಯಲ್ಲಿ ಜರಗುವ ‘ಯಕ್ಷಗಾನ ಕವಿ ಸಮಯ’ದಲ್ಲಿ ಪ್ರಸಂಗಕರ್ತ ಕವಿಗಳಾದ ಹರೀಶ ಶೆಟ್ಟಿ ಸೂಡಾ, ಡಾ.ದಿನಕರ ಎಸ್.ಪಚ್ಚನಾಡಿ, ಪವನ್ ಕಿರಣ್ಕೆರೆ, ಪ್ರಸಾದ್ ಮೊಗೆಬೆಟ್ಟು, ಕೋಲ್ಯಾರು ರಾಜು ಶೆಟ್ಟಿ, ದಿವಾಣ ದುರ್ಗಾಪ್ರಸಾದ್ ಭಟ್ ತಾವೇ ಬರೆದ ಯಕ್ಷಗಾನದ ಪದ್ಯಗಳನ್ನು ವಾಚಿಸುವರು. ಕಲಾವಿದರಾದ ಶ್ರೇಯಾ ಉಚ್ಚಿಲ್, ರೋಹಿತ್ ಉಚ್ಚಿಲ್, ಮಯೂರ್ ನಾಯಗ ಮತ್ತು ಮಧುಸೂದನ ಅಲೆವೂರಾಯ ಅವರ ಹಿಮ್ಮೇಳದಲ್ಲಿ ಆ ಪದ್ಯಗಳನ್ನು ಯಕ್ಷಗಾನ ಭಾಗವತಿಕೆ ಮೂಲಕ ಪ್ರಸ್ತುತಪಡಿಸಲಾಗುವುದು.

೫. ತುಳುನಾಡಿನ ಆರಾಧನಾ ಕಲೆಗಳು:

ಯಕ್ಷಗಾನ ಕೇವಲ ಒಂದು ರಂಗ ಕಲೆ ಮಾತ್ರವಲ್ಲ; ಅದೊಂದು ಆರಾಧನಾ ಕಲೆ. ತುಳುನಾಡಿನ ಇತರ ಆರಾಧನಾ ಪರಂಪರೆಯೊಂದಿಗೆ ಅದಕ್ಕೆ ನೇರ ಸಂಬಂಧವಿದೆ. ಆದ್ದರಿಂದ ಸಮ್ಮೇಳನದ ಎರಡನೇ ದಿನ ಅಕ್ಟೋಬರ್ 4 ರಂದು ಬೆಳಿಗ್ಗೆ ‘ತುಳುನಾಡಿನ ಆರಾಧನಾ ಕಲೆ’ಗಳ ಬಗ್ಗೆ ಪ್ರತ್ಯೇಕ ಗೋಷ್ಠಿಯೊಂದನ್ನು ಏರ್ಪಡಿಸಿದೆ. ಇದರಲ್ಲಿ ಕಟೀಲು ಕ್ಷೇತ್ರದ ಪ್ರಧಾನ ಅರ್ಚಕ ಹರಿನಾರಾಯಣ ದಾಸ ಆಸ್ರಣ್ಣ (ಯಕ್ಷಾರಾಧನೆ), ಜಾನಪದ ವಿದ್ವಾಂಸ ಕೆ.ಎಲ್. ಕುಂಡಂತಾಯ (ನಾಗಾರಾಧನೆ) ಮತ್ತು ಸಂಸ್ಕೃತಿ ಚಿಂತಕ ಶ್ರೀಕಾಂತ ಶೆಟ್ಟಿ ಕಾರ್ಕಳ (ದೈವಾರಾಧನೆ) ವಿಷಯ ಮಂಡನೆ ಮಾಡುವರು. ಬಹುಶ್ರುತ ವಿದ್ವಾಂಸ ಡಾ.ಪ್ರಭಾಕರ ಜೋಶಿ ಗೋಷ್ಠಿಯ ಸಮನ್ವಯಕಾರರು.
ಅಪರಾಹ್ನ ಯಕ್ಷಗಾನ ಅರ್ಥಧಾರಿ ಹರೀಶ್ ಭಟ್ ಬಳಂತಿಮೊಗರು ಅವರು ‘ಅಗಲಿದ ಯಕ್ಷಗಾನ ಕಲಾವಿದರ ಸಂಸ್ಮರಣೆ’ ಮಾಡುವರು.

೬. ಅಜೆಕಾರು ಬಳಗದ ಪ್ರಕಟಣೆಗಳ ಅವಲೋಕನ:

ಅಜೆಕಾರು ಕಲಾಭಿಮಾನಿ ಬಳಗವು ಕಳೆದ 25 ವರ್ಷಗಳಲ್ಲಿ ಮುಂಬೈಯಲ್ಲಿ ಕೇವಲ ಯಕ್ಷಗಾನ ಪ್ರದರ್ಶನ ಮತ್ತು ತಾಳಮದ್ದಳೆ ಸರಣಿಗಳನ್ನು ನಡೆಸಿದ್ದಲ್ಲ. ಅದರೊಂದಿಗೆ ಸುಮಾರು ಹತ್ತು ಗ್ರಂಥಗಳನ್ನು ಪ್ರಕಟಿಸಿದೆ. ಈ ಗ್ರಂಥಗಳ ಅವಲೋಕನಕ್ಕಾಗಿ ಸಮ್ಮೇಳನದಲ್ಲೊಂದು ವಿಶೇಷ ಗೋಷ್ಠಿ ನಡೆಯಲಿದೆ. ಇದರಲ್ಲಿ ಚಿಂತಕರಾದ ಭಾಸ್ಕರ ರೈ ಕುಕ್ಕುವಳ್ಳಿ (ಅಭಿನಂದನ ಮತ್ತು ಸಂಸ್ಮರಣ ಗ್ರಂಥಗಳು) ಮತ್ತು ಡಾ.ದಿನೇಶ್ ಶೆಟ್ಟಿ ರೆಂಜಾಳ (ಯಕ್ಷಗಾನ ಅರ್ಥ ಸಹಿತ ಪ್ರಸಂಗ ಕೃತಿಗಳು ಮತ್ತು ಇತರ ಪ್ರಕಟಣೆಗಳು) ಮಾತನಾಡುವರು.

ಇದೇ ವೇಳೆ ಪ್ರಾಧ್ಯಾಪಕಿ ಡಾ.ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ಸಂಪಾದಿಸಿದ ‘ಮುಂಬೈಯಲ್ಲಿ ಅಜೆಕಾರು ಕಲಾಭಿಮಾನಿ ಬಳಗ’ ಕುರಿತಾದ ಒಂದು ಕೃತಿಯನ್ನು ಗ್ರಂಥ ಬಾಗಿನದ ರೂಪದಲ್ಲಿ ಅಜೆಕಾರು ಬಾಲಕೃಷ್ಣ ಶೆಟ್ಟಿಯವರಿಗೆ ಅರ್ಪಿಸಲಾಗುವುದು. ಮುಂಬಯಿ ವಿಶ್ವವಿದ್ಯಾನಿಲಯ ಪ್ರಕಟಿಸಿದ ಈ ಗ್ರಂಥವನ್ನು ಅದರ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಜಿ.ಎನ್. ಉಪಾಧ್ಯ ಬಿಡುಡೆಗೊಳಿಸಿ ಕೃತಿ ಪರಿಚಯ ನೀಡುವರು.

೭. ಯಕ್ಷಗಾನ ಹಾಸ್ಯ: ಅನ್ವಯ ಮತ್ತು ಪ್ರದರ್ಶನ:

ಯಕ್ಷಗಾನ ರಂಗದಲ್ಲಿ ಭಾಗವತರ ಬಳಿಕದ ಸ್ಥಾನ ಹಾಸ್ಯಗಾರನದ್ದು. ಅದಕ್ಕಾಗಿ ಯಕ್ಷಗಾನ ಹಾಸ್ಯದ ಬಗ್ಗೆ ಪ್ರಯೋಗಾತ್ಮಕವಾದ ಗೋಷ್ಠಿ ಯೊಂದನ್ನು ಏರ್ಪಡಿಸಲಾಗಿದೆ. ಇದರಲ್ಲಿ ಕಲಾವಿದರಾದ ಜಯಪ್ರಕಾಶ್ ಶೆಟ್ಟಿ ಪೆರ್ಮುದೆ ಮತ್ತು ಬಾಲಕೃಷ್ಣ ಮಣಿಯಾಣಿ (ಋತುವಿನ – ಬಾಹುಕ), ದಿವಾಕರ ರೈ ಸಂಪಾಜೆ ಮತ್ತು ಪ್ರಜ್ವಲ್ ಕುಮಾರ್ ಗುರುವಾಯನಕೆರೆ (ಶ್ರೀಕೃಷ್ಣ – ಮಕರಂದ), ಪ್ರಶಾಂತ ಶೆಟ್ಟಿ ನೆಲ್ಯಾಡಿ ಮತ್ತು ಮಹೇಶ್ ಮಣಿಯಾಣಿ (ಮಾಲಿನಿ – ದೂತ) ವಿವಿಧ ಪಾತ್ರಗಳ ಪ್ರಾತ್ಯಕ್ಷಿಕೆ ನೀಡುವರು.

೮. ಯಕ್ಷಗಾನ ಸಂಘಟನೆ ಮತ್ತು ಕಲಾವಿದರ ಕ್ಷೇಮ ಚಿಂತನೆ:

ಅಕ್ಟೋಬರ 4ರಂದು ಸಂಜೆ ಸಮ್ಮೇಳನದ ಸಮಾರೋಪ ಸಮಾರಂಭದ ಮೊದಲು ನಡೆಯುವ ಮಹತ್ವದ ಗೋಷ್ಠಿ ‘ಯಕ್ಷಗಾನ ಸಂಘಟನೆ ಮತ್ತು ಕಲಾವಿದರ ಕ್ಷೇಮ ಚಿಂತನೆ’. ಇದರಲ್ಲಿ ಸಾಲಿಗ್ರಾಮ ಸೇರಿದಂತೆ ಬಡಗುತಿಟ್ಟಿನ ಐದು ಮೇಳಗಳ ಸಂಚಾಲಕ ಪಳ್ಳಿ ಕಿಶನ್ ಹೆಗ್ಡೆ ಮತ್ತು ತೆಂಕಿನ ಪಾವಂಜೆ ಮೇಳದ ಸಂಚಾಲಕ ಹಾಗೂ ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಅವರು ತಮ್ಮ ವಿಚಾರಗಳನ್ನು ಮಂಡಿಸುವರು. ಉಡುಪಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ಮತ್ತು ಹಿರಿಯ ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿ ಕಾಳಕಟ್ಟೆ ಪ್ರತಿಕ್ರಿಯೆ ನೀಡುವರು.

ಪ್ರದರ್ಶನ ಮತ್ತು ಪ್ರಯೋಗಗಳು:

ಎರಡು ದಿನಗಳ ಮುಂಬಯಿ ಯಕ್ಷಗಾನ ಸಮ್ಮೇಳದಲ್ಲಿ ವಿವಿಧ ಗೋಷ್ಠಿಗಳ ಮಧ್ಯಂತರದಲ್ಲಿ ವೈವಿಧ್ಯಮಯವಾದ ಯಕ್ಷಗಾನ ಪ್ರದರ್ಶನಗಳು ನಡೆಯಲಿವೆ. ಅಕ್ಟೋಬರ 3ರಂದು ಶನಿವಾರ ಬೆಳಿಗ್ಗೆ ಯಕ್ಷಗಾನದ ‘ಕೇಳಿ’ ಬಾರಿಸುವ ಮೂಲಕ ಮುಂಬೈ ನಗರದ ಭಾಗವತರುಗಳಿಂದ ಯಕ್ಷಗಾಯನವಿದೆ. ಬಳಿಕ ಸಾಂಸ್ಕೃತಿಕ ಮೆರವಣಿಗೆಯಲ್ಲಿ ಸಮ್ಮೇಳನಾಧ್ಯಕ್ಷ ಡಾ. ಟಿ. ಶ್ಯಾಮ ಭಟ್ ಮತ್ತು ಅತಿಥಿ ಗಣ್ಯರನ್ನು ಛಂದೋಬ್ರಹ್ಮ ಡಾ.ಎನ್. ನಾರಾಯಣ ಶೆಟ್ಟಿ ಶಿಮಂತೂರು ಸಭಾಂಗಣಕ್ಕೆ ಕರೆತಂದು, ಆರ್.ಕೆ. ಶೆಟ್ಟಿ ಯಕ್ಷಕಲಾ ವೇದಿಕೆಯಲ್ಲಿ ಉದ್ಘಾಟನಾ ಸಮಾರಂಭ ನೆರವೇರುವುದು. ಮೂಡಬಿದಿರೆಯ ಡಾ. ಎಂ. ಮೋಹನ ಆಳ್ವ ಸಮ್ಮೇಳನವನ್ನು ವಿಧ್ಯುಕ್ತವಾಗಿ ಉದ್ಘಾಟಿಸುವರು. ಸಮ್ಮೇಳನದ ಸವಿ ಸಂಪುಟ ‘ಯಕ್ಷಗಾನ ಮುಂಬೆಳಗು’ ಗ್ರಂಥವನ್ನು ಹೇರಂಬ ಇಂಡಸ್ಟ್ರೀಸ್ ಆಡಳಿತ ನಿರ್ದೇಶಕ ಡಾ.ಕನ್ಯಾನ ಸದಾಶಿವ ಶೆಟ್ಟಿ ಬಿಡುಗಡೆಗೊಳಿಸುವರು. ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಅಧ್ಯಕ್ಷತೆ ವಹಿಸುವರು. ವಿವಿಧ ಸಮಾಜದ ಗಣ್ಯರು, ಮಹನೀಯರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಯಕ್ಷಪ್ರಯೋಗ:

ಉದ್ಘಾಟನೆಯ ಬಳಿಕ ಪೃಥ್ವೀರಾಜ್ ಕವತ್ತಾರ್ ನಿರ್ದೇಶನದಲ್ಲಿ ಉಡುಪಿಯ ಥಿಯೇಟರ್ ಯಕ್ಷ (ರಿ.) ಇವರಿಂದ ತೆಂಕುತಿಟ್ಟಿನ ಸಂಕ್ಷಿಪ್ತ ಪೂರ್ವರಂಗ ಮತ್ತು ‘ಪಂಪಾತೀರ’ ಕಥಾನಕದ ಪ್ರಸ್ತುತಿ ಇದೆ.

ತುಳು ತಾಳಮದ್ದಳೆ ಮತ್ತು ಬಡಗು ಯಕ್ಷಗಾನ:

ಅಂದು ಅಪರಾಹ್ನ ಯಕ್ಷಗಾನ ರಂಗದ ಪ್ರಸಿದ್ಧ ಕಲಾವಿದರಿಂದ ‘ಬೀರ ಸಿರಿತ ಗಾಂಡೀವ’ ತುಳು ತಾಳಮದ್ದಳೆ ಜರಗಲಿದೆ. ಡಾ. ಎಂ. ಪ್ರಭಾಕರ ಜೋಶಿ, ಭಾಸ್ಕರ ರೈ ಕುಕ್ಕುವಳ್ಳಿ, ಎಂ.ಕೆ. ರಮೇಶ ಆಚಾರ್ಯ ಜಬ್ಬಾರ್ ಸಮೋ , ಗಣರಾಜ ಕುಂಬಳೆ, ಸದಾಶಿವ ಆಳ್ವ ತಲಪಾಡಿ, ಅಶೋಕ ಪಕ್ಕಳ, ಪ್ರಜ್ವಲ್ ಕುಮಾರ್ ಗುರುವಾಯನಕೆರೆ ಅರ್ಥಧಾರಿಗಳಾಗಿರುವರು. ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ, ದೇವೀಪ್ರಸಾದ ಆಳ್ವ ತಲಪಾಡಿ ಪ್ರಶಾಂತ ಶೆಟ್ಟಿ ವಗೆನಾಡು, ಹರಿಶ್ಚಂದ್ರ ನಾಯಗ ಮತ್ತು ಮಯೂರ ನಾಯಗ ಹಿಮ್ಮೇಳದಲ್ಲಿರುವರು.

ದಿನದ ಕೊನೆಯಲ್ಲಿ ರಾತ್ರಿ ಬನ್ನಂಜೆ ಸಂಜೀವ ಸುವರ್ಣ ಅವರ ನಿರ್ದೇಶನದಲ್ಲಿ ಯಕ್ಷ ಸಂಜೀವ ಯಕ್ಷಗಾನ ಕೇಂದ್ರ (ರಿ.) ಉಡುಪಿ ಇವರಿಂದ ‘ಚಕ್ರವ್ಯೂಹ’ ಬಡಗು ತಿಟ್ಟು ಯಕ್ಷಗಾನ ಪ್ರದರ್ಶನವಿದೆ.

ಗೊಂಬೆಯಾಟ – ತೆಂಕುತಿಟ್ಟು ಯಕ್ಷಗಾನ:

ಅಕ್ಟೋಬರ 4ರಂದು ಭಾನುವಾರ ಬೆಳಿಗ್ಗೆ ಕಾಸರಗೋಡಿನ ಕೆ.ವಿ. ರಮೇಶ್ ನಿರ್ದೇಶನದಲ್ಲಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘ (ರಿ.) ಕಾಸರಗೋಡು ಇವರಿಂದ ‘ನರಕಾಸುರ ವಧೆ’ ಯಕ್ಷಗಾನ ಬೊಂಬೆಯಾಟದ ಪ್ರದರ್ಶನವಿದೆ.

ಸಂಜೆ ಜರಗುವ ಸಮಾರೋಪ ಸಮಾರಂಭದಲ್ಲಿ ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡುವರು. ವಿದ್ವಾಂಸ ಡಾ. ಪ್ರಭಾಕರ ಜೋಶಿ ಸಮ್ಮೇಳನದ ಅವಲೋಕನ ನಡೆಸುವರು. ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಸಮ್ಮೇಳನಾಧ್ಯಕ್ಷ ಡಾ.ಟಿ ಶ್ಯಾಮ ಭಟ್ಟರನ್ನು ಸನ್ಮಾನಿಸುವರು. ಗೌರವಾಧ್ಯಕ್ಷ ಡಾ.ಕನ್ಯಾನ ಸದಾಶಿವ ಶೆಟ್ಟಿ ಅವರು ಯಕ್ಷಗಾನ ಕ್ಷೇತ್ರದ ಆಯ್ದ ಹಿರಿಯ ಸಾಧಕರಿಗೆ ‘ಯಕ್ಷರಕ್ಷಾ ಪ್ರಶಸ್ತಿ ಪ್ರದಾನ’ ಮಾಡುವರು.

ಸಮಾರೋಪದ ಬಳಿಕ ತೆಂಕುತಿಟ್ಟಿನ ಪ್ರಸಿದ್ಧ ಮೇಳಗಳ ಕಲಾವಿದರಿಂದ ‘ರುಕ್ಮಿಣಿ ಕಲ್ಯಾಣ’ ಯಕ್ಷಗಾನ ಪ್ರದರ್ಶನ ಜರಗುವುದು. ಪಟ್ಲ ಸತೀಶ್ ಶೆಟ್ಟಿ, ಭರತ್ ಶೆಟ್ಟಿ ಸಿದ್ಧಕಟ್ಟೆ, ದೇಳಂತಮಜಲು ಸುಬ್ರಹ್ಮಣ್ಯ ಭಟ್, ಪ್ರಶಾಂತ ಶೆಟ್ಟಿ ವಗೆನಾಡು, ರೋಹಿತ್ ಉಚ್ಚಿಲ್, ಹರಿಶ್ಚಂದ್ರ ಮತ್ತು ಮಯೂರ್ ನಾಯಗ ಹಿಮ್ಮೇಳದಲ್ಲಿರುವರು. ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಹರೀಶ್ ಬಳಂತಿಮೊಗರು, ರವಿಶಂಕರ ವಳಕುಂಜ, ಮಹೇಶ್ ಮಣಿಯಾಣಿ, ದಿವಾಕರ ರೈ ಸಂಪಾಜೆ, ದಿನೇಶ್ ಶೆಟ್ಟಿ ಕಾವಳಕಟ್ಟೆ, ಪ್ರಶಾಂತ ಶೆಟ್ಟಿ ನೆಲ್ಯಾಡಿ, ಪ್ರಜ್ವಲ್ ಕುಮಾರ್ ಗುರುವಾಯನಕೆರೆ, ಅವಿನಾಶ್ ಶೆಟ್ಟಿ ಉಬರಡ್ಕ, ಪ್ರಸಾದ್ ಸವಣೂರು, ಅಜಿತ್ ಪುತ್ತಿಗೆ, ಗೋವಿಂದ ಸಫಲಿಗ ವೇಷಧಾರಿಗಳಾಗಿರುವರು.

ಸಮ್ಮೇಳನ ದ್ವಾರಗಳು ಮತ್ತು ಪ್ರದರ್ಶನ:

ಮುಂಬೈ ಯಕ್ಷಗಾನ ಸಮ್ಮೇಳದ ಮಹಾದ್ವಾರ ಮತ್ತು ಸಭಾಂಗಣದ ವಿವಿಧ ದ್ವಾರಗಳಿಗೆ ಅಗಲಿದ ಹಿರಿಯ ಕಲಾವಿದರಾದ ಅಳಿಕೆ ರಾಮಯ್ಯ ರೈ, ಕೆ.ಗೋವಿಂದ ಭಟ್ , ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ, ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ ಮತ್ತು ಮುಂಬಯಿ ಪದವೀಧರ ಯಕ್ಷಗಾನ ಸಂಘದ ಅಧ್ಯಕ್ಷ ದಿ|ಎಚ್.ಬಿ.ಎಲ್. ರಾವ್ ಅವರ ಹೆಸರುಗಳನ್ನು ಇರಿಸಲಾಗಿದೆ.

ಸಮ್ಮೇಳನದ ಆವರಣದಲ್ಲಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜರ ಹೆಸರಿನಲ್ಲಿರುವ ‘ಜ್ಞಾನಾಂಗಣ’ ಪುಸ್ತಕ ಪ್ರದರ್ಶನ ವಿಭಾಗದಲ್ಲಿ ಸಮ್ಮೇಳನದಲ್ಲಿ ಬಿಡುಗಡೆಗೊಳ್ಳುವ ಸಂಪುಟ ‘ಯಕ್ಷಗಾನ ಮುಂಬೆಳಗು’, ಭಾಸ್ಕರ ರೈ ಕುಕ್ಕುವಳ್ಳಿಯವರ ‘ಯಕ್ಷಾಲೋಕ’, ಹರೀಶ್ ಶೆಟ್ಟಿ ಸೂಡ ಅವರ ‘ಯಕ್ಷ ಪಂಚೋಳಿ’ ಹಾಗೂ ಅಜೆಕಾರು ಕಲಾಭಿಮಾನಿ ಬಳಗದ ಎಲ್ಲಾ ಪ್ರಕಟಣೆಗಳು ಮತ್ತು ಯಕ್ಷಗಾನ ಸಂಬಂಧಿಯಾದ ಇತರ ಸಂಗ್ರಹಯೋಗ್ಯ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಇದೆ. ಅಲ್ಲದೆ ಮುಬೈಯ ಕಲಾಪೋಷಕ ಶೇಖರ ಶೆಟ್ಟಿ ಇನ್ನ ಕಾಚೂರು ಅವರ ಹೆಸರಿನ ‘ಛಾಯಾಂಗಣ’ ಮಳಿಗೆಯಲ್ಲಿ ಯಕ್ಷಗಾನ ಕಲಾವಿದ ಮತ್ತು ಛಾಯಾಚಿತ್ರಗ್ರಾಹಕ ಮನೋಹರ ಎಸ್. ಕುಂದರ್ ಬಡಾ ಎರ್ಮಾಲ್ ಅವರಿಂದ ಬಹು ಅಪರೂಪದ ‘ಯಕ್ಷ ಛಾಯಾಚಿತ್ರ ಪ್ರದರ್ಶನ’ವನ್ನು ಏರ್ಪಡಿಸಲಾಗಿದೆ.

ಸಮ್ಮೇಳನದ ಪ್ರಧಾನ ವೇದಿಕೆಯಲ್ಲಿ ಹಲವು ಮಂದಿ ಯಕ್ಷಗಾನ ಕಲಾವಿದರು, ಕಲಾ ಪೋಷಕರು ಮತ್ತು ಸಂಘ ಸಂಸ್ಥೆಗಳಿಗೆ ಕಲಾ ಗೌರವ, ರಜತ ಯಕ್ಷರಕ್ಷಾ ಪ್ರಶಸ್ತಿ ಮತ್ತು ಮಾತೃಶ್ರೀ ಯಕ್ಷರಕ್ಷಾ ಪ್ರಶಸ್ತಿಗಳನ್ನು ವಿವಿಧ ಕ್ಷೇತ್ರದ ಅತಿಥಿ ಗಣ್ಯರ ಮೂಲಕ ಕೊಡಮಾಡಲಾಗುವುದು. ಈ ಎಲ್ಲಾ ಕಾರ್ಯಕ್ರಮಗಳನ್ನು ಅಜೆಕಾರು ಕಲಾಭಿಮಾನಿ ಬಳಗದ ಅಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ ಸಂಘಟಿಸಿದ್ದು ಕಲಾಭಿಮಾನಿಗಳ ಸಂಪೂರ್ಣ ಸಹಕಾರವನ್ನು ಕೋರಿದ್ದಾರೆ.

ಭಾಸ್ಕರ ರೈ ಕುಕ್ಕುವಳ್ಳಿ