ಜೈನ್‌ಮಿಲನ್‌ನಿಂದ ಸಮಾಜ ಸಂಘಟನೆಗೆ ಬಲ; ಸದಸ್ಯತ್ವ ಅಭಿಯಾನಕ್ಕೆ ಚಾಲನೆ

0
8

ಉಜಿರೆ : ಜೈನ ಸಮಾಜದ ಸಂಘಟನೆ ಮತ್ತು ಬಲವರ್ಧನೆ ಉದ್ದೇಶದಿಂದ ಭಾರತೀಯ ಜೈನ್‌ಮಿಲನ್ ವತಿಯಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಬೆಳ್ತಂಗಡಿ ಜೈನ್‌ಮಿಲನ್ ಆಶ್ರಯದಲ್ಲಿ ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಆಯೋಜಿಸಿದ್ದ ಮಾಸಿಕ ಸಭೆ ಹಾಗೂ ಆಹಾರೋತ್ಸವ ಕಾರ್ಯಕ್ರಮದಲ್ಲಿ ಭಾರತೀಯ ಜೈನ್‌ಮಿಲನ್ ವಲಯ–8ರ ಉಪಾಧ್ಯಕ್ಷ ಸುದರ್ಶನ್ ಜೈನ್ ಬಂಟ್ವಾಳ ಅವರು ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಜೈನರು ಅಲ್ಪಸಂಖ್ಯಾತ ಸಮುದಾಯವಾಗಿದ್ದರೂ ಸತ್ಯ, ಧರ್ಮ ಮತ್ತು ಅಹಿಂಸೆಯ ಪರಿಪಾಲನೆಯೊಂದಿಗೆ ಉತ್ತಮ ಜೀವನಶೈಲಿ, ಆದರ್ಶ ಆಹಾರ–ವಿಹಾರ, ಆಚಾರ–ವಿಚಾರ ಹಾಗೂ ಸಾಮಾಜಿಕ ಬದ್ಧತೆಯನ್ನು ಹೊಂದಿದ್ದಾರೆ. ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸೇವಾ ಮನೋಭಾವದಿಂದ ಸಮಾಜದಲ್ಲಿ ಉತ್ತಮ ಸ್ಥಾನಮಾನ ಹಾಗೂ ಗೌರವವನ್ನು ಗಳಿಸಿದ್ದಾರೆ ಎಂದು ಸುದರ್ಶನ್ ಜೈನ್ ಹೇಳಿದರು.

ಪ್ರಕೃತಿಯಲ್ಲಿ ಹೇರಳವಾಗಿ ದೊರೆಯುವ ನೆಲ್ಲಿಕಾಯಿ, ಕೆಸು, ನುಗ್ಗೆ, ಹರಿವೆಸೊಪ್ಪು, ಮಾವು ಮೊದಲಾದ ಪೌಷ್ಠಿಕ ಆಹಾರ ಪದಾರ್ಥಗಳ ಬಳಕೆ ಮತ್ತು ಅವುಗಳ ಮಹತ್ವದ ಕುರಿತು ಅರಿವು ಮೂಡಿಸುವುದು ಆಹಾರೋತ್ಸವದ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.

ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯಾದ ಭಾರತೀಯ ಜೈನ್‌ಮಿಲನ್ ಆಶ್ರಯದಲ್ಲಿ ವಿವಿಧೆಡೆ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಗೆ ಜಿನಭಜನಾ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಇಂತಹ ಕಾರ್ಯಕ್ರಮಗಳು ಸಮಾಜದ ಸಂಘಟನೆ ಬಲಪಡಿಸುವುದರೊಂದಿಗೆ ಸದಸ್ಯರ ನಡುವೆ ಪ್ರೀತಿ, ವಿಶ್ವಾಸ ಮತ್ತು ಆತ್ಮೀಯತೆಯನ್ನು ಹೆಚ್ಚಿಸುತ್ತಿವೆ ಎಂದರು.

ಫೆ. 13, 14ರಂದು ಕಾರ್ಕಳದಲ್ಲಿ ರಾಜ್ಯಮಟ್ಟದ ಜಿನಭಜನಾ ಸ್ಪರ್ಧೆ

2027ರ ಫೆಬ್ರವರಿ 13 ಮತ್ತು 14ರಂದು ಕಾರ್ಕಳದಲ್ಲಿ ಭಗವಾನ್ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕದ ಅಂಗವಾಗಿ ರಾಜ್ಯಮಟ್ಟದ ಜಿನಭಜನಾ ಸ್ಪರ್ಧೆ ನಡೆಯಲಿದೆ ಎಂದು ಸುದರ್ಶನ್ ಜೈನ್ ಪ್ರಕಟಿಸಿದರು. ಇದೇ ವೇಳೆ ಅಕ್ಟೋಬರ್ 25ರಂದು ವೇಣೂರಿನಲ್ಲಿ ‘ಕರಾವಳಿ ಮಿಲನೋತ್ಸವ’ ಎಂಬ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜೈನ ಸಮಾಜದ ಸಂಘಟನೆ ಹಾಗೂ ಬಲವರ್ಧನೆಗಾಗಿ ಆರಂಭಿಸಿರುವ ಸದಸ್ಯತ್ವ ಅಭಿಯಾನವನ್ನು ಯಶಸ್ವಿಗೊಳಿಸಲು ಎಲ್ಲರೂ ಸಕ್ರಿಯವಾಗಿ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.

ಎಸ್‌ಡಿಎಂ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ. ಪ್ರಮೋದ್ ಕುಮಾರ್ ಮಾತನಾಡಿ, ಜೈನ್‌ಮಿಲನ್ ಸದಸ್ಯರು ಸಮಾಜಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಹಕರಿಸುವಂತೆ ಕರೆ ನೀಡಿದರು.

ಭಾರತೀಯ ಜೈನ್‌ಮಿಲನ್ ವಲಯ–8ರ ನಿರ್ದೇಶಕ ಬಿ. ಸೋಮಶೇಖರ ಶೆಟ್ಟಿ ಶುಭಾಶಂಸನೆ ನೀಡಿ, ಸ್ಥಳೀಯ ಜೈನ್‌ಮಿಲನ್ ಘಟಕಗಳ ಮೂಲಕ ಪ್ರತಿಯೊಬ್ಬರೂ ಸ್ವಯಂಪ್ರೇರಿತರಾಗಿ ಸದಸ್ಯತ್ವ ಅಭಿಯಾನದಲ್ಲಿ ಪಾಲ್ಗೊಂಡು ಅದನ್ನು ಯಶಸ್ವಿಗೊಳಿಸಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಕಕ್ಕಿಂಜೆಯ ಪಾಕಶಾಸ್ತ್ರ ಪ್ರವೀಣ ಅಶೋಕ ಕುಮಾರ್ ಜೈನ್ ಅವರನ್ನು ಗೌರವಿಸಲಾಯಿತು. ಅರ್ಪಣಾ ರವೀಶ್ ವರದಿ ಮಂಡಿಸಿದರು. ಬೆಳ್ತಂಗಡಿ ಜೈನ್‌ಮಿಲನ್ ಅಧ್ಯಕ್ಷ ಡಾ. ಸನ್ಮತಿಕುಮಾರ್ ಸ್ವಾಗತಿಸಿದರು. ಎಸ್‌ಡಿಎಂ ಪ್ರೌಢಶಾಲೆಯ ಶಿಕ್ಷಕ ರವೀಶ್ ಕುಮಾರ್ ವಂದಿಸಿದರು. ಸಂಪತ್‌ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.

ಸಾಮೂಹಿಕ ಪಂಚನಮಸ್ಕಾರ ಮಂತ್ರ ಪಠಣದೊಂದಿಗೆ ಕಾರ್ಯಕ್ರಮ ಆರಂಭಗೊಂಡು, ಶಾಂತಿಮಂತ್ರ ಪಠಣದೊಂದಿಗೆ ಸಮಾಪನಗೊಂಡಿತು.