ಬ್ರಹ್ಮಾವರ: ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ (ರುಡ್ಸೆಟ್) ಸಂಸ್ಥೆ, ಬ್ರಹ್ಮಾವರ ವತಿಯಿಂದ ಆಯೋಜಿಸಲಾಗಿದ್ದ ಅಗರಬತ್ತಿ ತಯಾರಿಕೆ ತರಬೇತಿಯ ಸಮಾರೋಪ ಸಮಾರಂಭವು ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಉಡುಪಿ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ. ಪ್ರತೀಕ್ ಬಾಯಲ್ ಅವರು ಶಿಬಿರಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಿ ಮಾತನಾಡಿದರು.“ವಿಕಸಿತ ಭಾರತದ ಸಂಕಲ್ಪವನ್ನು ನಾವು ಯಶಸ್ವಿಗೊಳಿಸಬೇಕಾದರೆ ಮಹಿಳೆಯರು ಇಂತಹ ಕೌಶಲ್ಯಾಧಾರಿತ ತರಬೇತಿಗಳನ್ನು ಪಡೆದು, ತಮ್ಮ ಕೌಶಲ್ಯವನ್ನು ವೃದ್ಧಿಸಿಕೊಂಡು ಸ್ವಾವಲಂಬಿಗಳಾಗಿ ಉದ್ಯಮಗಳನ್ನು ಪ್ರಾರಂಭಿಸಬೇಕು. ಇದರಿಂದ ಕುಟುಂಬ ಹಾಗೂ ಸಮಾಜದ ಆರ್ಥಿಕ ಪ್ರಗತಿಗೆ ಕೊಡುಗೆ ನೀಡಲು ಸಾಧ್ಯವಾಗುತ್ತದೆ” ಎಂದು ಅವರು ಹೇಳಿದರು.
ಕೇವಲ ತರಬೇತಿ ಪಡೆಯುವುದರಿಂದ ಮಾತ್ರ ಉದ್ದೇಶ ಈಡೇರುವುದಿಲ್ಲ. ತರಬೇತಿಯ ಮೂಲಕ ಪಡೆದ ಜ್ಞಾನ ಮತ್ತು ಕೌಶಲ್ಯವನ್ನು ಉದ್ಯಮದಲ್ಲಿ ಅಳವಡಿಸಿಕೊಂಡು, ಸ್ವಂತ ಉದ್ಯಮವನ್ನು ಪ್ರಾರಂಭಿಸಿ ಅದನ್ನು ನಿರಂತರವಾಗಿ ಅಭಿವೃದ್ಧಿಪಡಿಸುವುದು ಮುಖ್ಯವಾಗಿದೆ. ಆಗ ಮಾತ್ರ ಇಂತಹ ತರಬೇತಿಗಳು ಯಶಸ್ವಿಯಾಗುತ್ತವೆ ಎಂದು ಅವರು ತಿಳಿಸಿದರು. “ಒಬ್ಬ ಪುರುಷ ಶಿಕ್ಷಣ ಪಡೆದರೆ ಅದು ವೈಯಕ್ತಿಕ ಬೆಳವಣಿಗೆಗೆ ಸೀಮಿತವಾಗಬಹುದು. ಆದರೆ ಒಬ್ಬ ಮಹಿಳೆ ಶಿಕ್ಷಣ ಮತ್ತು ಕೌಶಲ್ಯವನ್ನು ಪಡೆದರೆ, ಇಡೀ ಕುಟುಂಬವೇ ಸಬಲಗೊಳ್ಳುತ್ತದೆ” ಎಂದು ಅವರು ಅಭಿಪ್ರಾಯಪಟ್ಟರು.
ವಯಸ್ಸು ಹಾಗೂ ಆಸಕ್ತಿಯ ಆಧಾರದ ಮೇಲೆ ವಿವಿಧ ಗುಂಪುಗಳನ್ನು ರಚಿಸಿ, ಸಣ್ಣ ಪ್ರಮಾಣದ ಉದ್ಯಮಗಳನ್ನು ಪ್ರಾರಂಭಿಸಲು ಉತ್ತೇಜನ ನೀಡಲಾಗುತ್ತಿದೆ. ಇದಕ್ಕೆ ಪೂರಕವಾಗಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (NRLM) ವತಿಯಿಂದ ವಿವಿಧ ರೀತಿಯ ಸಹಕಾರ ಮತ್ತು ನೆರವು ಒದಗಿಸಲಾಗುತ್ತಿದೆ. ಸರ್ಕಾರದ ವಿವಿಧ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು, ಪಡೆದಿರುವ ತರಬೇತಿಯನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಅವರು ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರುಡ್ಸೆಟ್ ಸಂಸ್ಥೆಯ ನಿರ್ದೇಶಕ ಡಾ. ಬೊಮ್ಮಯ್ಯ ಎಂ. ಅವರು ಮಾತನಾಡಿ, ಮುಖ್ಯ ಅತಿಥಿಗಳು ತಿಳಿಸಿದ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸದ್ಬಳಕೆ ಮಾಡಿಕೊಳ್ಳುವ ಸಂಕಲ್ಪವನ್ನು ಎಲ್ಲರೂ ಮಾಡಬೇಕು. ತರಬೇತಿಯ ಅವಧಿಯಲ್ಲಿ ಪಾಲಿಸಿದ ಶಿಸ್ತು, ಸಮಯಪಾಲನೆ ಹಾಗೂ ಉತ್ತಮ ಅಭ್ಯಾಸಗಳನ್ನು ಜೀವನದುದ್ದಕ್ಕೂ ಮುಂದುವರಿಸಿಕೊಂಡು ಹೋದರೆ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ವಿ ಕೇರ್ ಸೊಸೈಟಿಯ ವ್ಯವಸ್ಥಾಪಕರಾದ ಶ್ರೀ. ರಾಘವೇಂದ್ರ ಹಾಗೂ ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು.ಉಪನ್ಯಾಸಕಿ ಶ್ರೀಮತಿ ಚೈತ್ರ ಕೆ. ಅವರು ಕಾರ್ಯಕ್ರಮ ನಿರೂಪಿಸಿದರು. ಕಚೇರಿ ಸಹಾಯಕರಾದ ಶ್ರೀ. ಶಾಂತಪ್ಪ ಸ್ವಾಗತಿಸಿದರು. ಹಿರಿಯ ಕಚೇರಿ ಸಹಾಯಕರಾದ ಶ್ರೀ. ರವಿ ವಂದಿಸಿದರು.

