ಬೆಂಗಳೂರು–ಮಂಗಳೂರು ವಂದೇ ಭಾರತ್‌ಗೆ ಚಾಲನೆ : ಸುಬ್ರಹ್ಮಣ್ಯ ಘಾಟ್‌ನಲ್ಲಿ ಪ್ರಾಯೋಗಿಕ ಸಂಚಾರ

0
131

ಸುಬ್ರಹ್ಮಣ್ಯ : ಕರಾವಳಿ ಭಾಗದ ಜನರ ಬಹುದಿನಗಳ ನಿರೀಕ್ಷೆಯಾಗಿರುವ ಬೆಂಗಳೂರು–ಮಂಗಳೂರು ಮಾರ್ಗದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಪ್ರಾಯೋಗಿಕ ಸಂಚಾರಕ್ಕೆ ನೈಋತ್ಯ ರೈಲ್ವೆಯ ಮೈಸೂರು ವಿಭಾಗ ಚಾಲನೆ ನೀಡಿದೆ. ಆಷಾಢ ಅಮಾವಾಸ್ಯೆಯ ದಿನವೇ ಸುಬ್ರಹ್ಮಣ್ಯ–ನೆಟ್ಟಣ ಮತ್ತು ಸಕಲೇಶಪುರ ನಡುವಿನ ಘಾಟ್ ಪ್ರದೇಶದಲ್ಲಿ ರೈಲಿನ ಪ್ರಾಯೋಗಿಕ ಸಂಚಾರ ಆರಂಭವಾಗಿರುವುದು ವಿಶೇಷವಾಗಿದೆ.

ಕೇಸರಿ ಬಣ್ಣದ 20 ಬೋಗಿಗಳ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕಡಿದಾದ ಘಾಟ್ ಪ್ರದೇಶದಲ್ಲಿ ತನ್ನ ಮೊದಲ ಪ್ರಾಯೋಗಿಕ ಸಂಚಾರ ನಡೆಸಿತು. ಸುರಕ್ಷತಾ ಪರೀಕ್ಷೆಯ ಹಿನ್ನೆಲೆಯಲ್ಲಿ ರೈಲಿನಲ್ಲಿ ಪ್ರಯಾಣಿಕರನ್ನು ಕರೆದೊಯ್ಯದೆ, ಬೋಗಿಗಳಲ್ಲಿ ಮರಳಿನ ಚೀಲಗಳನ್ನು ತುಂಬಿಸಿ ವಿವಿಧ ವೇಗಗಳಲ್ಲಿ ರೈಲನ್ನು ಸಂಚರಿಸಲಾಯಿತು. ಈ ಮೂಲಕ ಘಾಟ್ ಪ್ರದೇಶದಲ್ಲಿ ರೈಲಿನ ವೇಗ, ಬ್ರೇಕಿಂಗ್ ವ್ಯವಸ್ಥೆ ಹಾಗೂ ತಾಂತ್ರಿಕ ಸಾಮರ್ಥ್ಯವನ್ನು ಪರಿಶೀಲಿಸಲಾಗುತ್ತಿದೆ.

ಸುಬ್ರಹ್ಮಣ್ಯ–ಸಕಲೇಶಪುರ ನಡುವಿನ ಘಾಟ್ ಪ್ರದೇಶವು ಕಡಿದಾದ ಏರು-ಇಳಿಜಾರು ಹಾಗೂ ತಿರುವುಗಳಿಂದ ಕೂಡಿರುವುದರಿಂದ ರೈಲು ಸಂಚಾರಕ್ಕೆ ವಿಶೇಷ ಸುರಕ್ಷತಾ ಕ್ರಮಗಳ ಅಗತ್ಯವಿದೆ. ಈ ಮಾರ್ಗದಲ್ಲಿ ಸಾಮಾನ್ಯ ರೈಲುಗಳಿಗೆ ಹೆಚ್ಚುವರಿ ಬ್ಯಾಂಕರ್ ಇಂಜಿನ್‌ಗಳ ನೆರವು ಅಗತ್ಯವಾಗುತ್ತದೆ.

ಆದರೆ ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಿಂದ ಬಂದಿರುವ ವಂದೇ ಭಾರತ್ ರೇಕ್‌ನಲ್ಲಿ ಅತ್ಯಾಧುನಿಕ ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್ ತಂತ್ರಜ್ಞಾನ ಸೇರಿದಂತೆ ವಿವಿಧ ಸುರಕ್ಷತಾ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ಹೀಗಾಗಿ ಘಾಟ್ ಪ್ರದೇಶದಲ್ಲಿ ರೈಲು ಸುರಕ್ಷಿತವಾಗಿ ಸಂಚರಿಸುವ ಸಾಮರ್ಥ್ಯವನ್ನು ರೈಲ್ವೆ ಅಧಿಕಾರಿಗಳು ಪರೀಕ್ಷಿಸುತ್ತಿದ್ದಾರೆ.

ರೈಲ್ವೆ ಮತ್ತು ಸುರಕ್ಷತಾ ವಿಭಾಗದ ಅಧಿಕಾರಿಗಳ ಕಟ್ಟುನಿಟ್ಟಿನ ಪರಿಶೀಲನೆಯ ಬಳಿಕ ಪ್ರಾಯೋಗಿಕ ಸಂಚಾರಕ್ಕೆ ಹಸಿರು ನಿಶಾನೆ ದೊರೆತಿದ್ದು, ಮುಂದಿನ ಹಂತದಲ್ಲಿ ವಿವಿಧ ತಾಂತ್ರಿಕ ಪರೀಕ್ಷೆಗಳು ನಡೆಯಲಿವೆ. ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿ ಪೂರ್ಣಗೊಂಡು ಅಗತ್ಯ ಸುರಕ್ಷತಾ ಅನುಮೋದನೆಗಳು ದೊರೆತ ಬಳಿಕ ಬೆಂಗಳೂರು–ಮಂಗಳೂರು ನಡುವೆ ವಂದೇ ಭಾರತ್ ಸೇವೆ ಆರಂಭಿಸುವ ಸಾಧ್ಯತೆ ಇದೆ.

ಈ ರೈಲು ಸೇವೆ ಆರಂಭವಾದರೆ ಬೆಂಗಳೂರು, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ, ಪುತ್ತೂರು ಹಾಗೂ ಮಂಗಳೂರು ಭಾಗದ ಪ್ರಯಾಣಿಕರಿಗೆ ವೇಗದ ಮತ್ತು ಆರಾಮದಾಯಕ ರೈಲು ಸಂಪರ್ಕ ದೊರೆಯುವ ನಿರೀಕ್ಷೆಯಿದೆ. ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ಆರಂಭವಾಗಿರುವುದರಿಂದ ಕರಾವಳಿ ಹಾಗೂ ಮಲೆನಾಡು ಭಾಗದ ಪ್ರಯಾಣಿಕರಲ್ಲಿ ಹೊಸ ನಿರೀಕ್ಷೆ ಮೂಡಿದೆ.