ಉಳ್ಳಾಲ : ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತೊಕ್ಕೊಟ್ಟಿನ ಶ್ರೀ ಸಾಯಿ ಪರಿವಾರ್ ಟ್ರಸ್ಟ್ ಮತ್ತು ಕರ್ನಾಟಕ ಜಾನಪದ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾ,ಉಳ್ಳಾಲ ತಾಲೂಕು ಘಟಕದ ಜಂಟಿ ಆಶ್ರಯದಲ್ಲಿ, ಕೊರಗಜ್ಜ ಸನ್ನಿಧಿಯಲ್ಲಿ ಆಟಿ ಅಮವಾಸ್ಯೆಯ ಅಂಗವಾಗಿ ಸಾರ್ವಜನಿಕರಿಗೆ ಸಾಂಪ್ರದಾಯಿಕ ‘ಆಟಿ ಕಷಾಯ’ (ಹಾಲೆ ಮರದ ಕಷಾಯ) ಹಾಗೂ ‘ಮೆತ್ತೆ ಗಂಜಿ’ಯನ್ನು ವಿತರಿಸುವ ಅರ್ಥಪೂರ್ಣ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಜಾನಪದ ಪರಿಷತ್ ಉಳ್ಳಾಲ ತಾಲೂಕು ಘಟಕದ ಅಧ್ಯಕ್ಷ ಹಾಗೂ ಸಾಯಿ ಪರಿವಾರ್ ಟ್ರಸ್ಟಿ ಪ್ರವೀಣ್ ಎಸ್ ಕುಂಪಲ ಅವರು, ತುಳುನಾಡಿನ ಸಾಂಸ್ಕೃತಿಕ, ವೈಜ್ಞಾನಿಕ ಹಾಗೂ ವೈದ್ಯಕೀಯ ಗುಣಗಳಿರುವ ಉತ್ಕೃಷ್ಟ ಆಹಾರ ಪದ್ಧತಿಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಅಗತ್ಯತೆಯನ್ನು ಒತ್ತಿ ಹೇಳಿದರು.
ಇಂದಿನ ಆಧುನಿಕ ಯುಗದಲ್ಲಿ ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಸ್ಟೇಟಸ್ ಹಾಕುವುದಕ್ಕೆ ಆಚರಣೆಗಳು ಸೀಮಿತವಾಗಬಾರದು. ಬದಲಾಗಿ, ನಶಿಸುತ್ತಿರುವ ಔಷಧೀಯ ಗುಣಯುಕ್ತ ಹಾಲೆ ಮರಗಳನ್ನು ಸಂರಕ್ಷಿಸಲು ವನಮಹೋತ್ಸವ ಹಾಗೂ ಪರಿಸರ ದಿನದ ಸಂದರ್ಭದಲ್ಲಿ ನಾವೆಲ್ಲರೂ ತಪ್ಪದೆ ಹಾಲೆ ಗಿಡಗಳನ್ನು ನಾಟಿ ಮಾಡಿ ಬೆಳೆಸಬೇಕು.
ಅಲ್ಲದೆ, ಮನೆಯಲ್ಲೇ ಸ್ವತಃ ಹಾಲೆ ಕಷಾಯವನ್ನು ತಯಾರಿಸುವ ಸಾಂಪ್ರದಾಯಿಕ ಶೈಲಿಯನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದು ಕರೆಯಿತ್ತರು
ತುಳುನಾಡಿನ ಹಿರಿಯರ ಆರೋಗ್ಯ ರಕ್ಷಣೆಯ ಜ್ಞಾನವನ್ನು ಬಿಂಬಿಸುವ ಕಾರ್ಯಕ್ರಮ ಶ್ಲಾಘನೀಯ ಎಂದು ಸಭೆಯಲ್ಲಿ ಅಭಿಪ್ರಾಯಪಡಲಾಯಿತು.
ಗಣ್ಯರ ಉಪಸ್ಥಿತಿ:-
ಕಾರ್ಯಕ್ರಮದಲ್ಲಿ ಸಾಯಿ ಪರಿವಾರ್‌ನ ಟ್ರಸ್ಟಿಗಳಾದ ಗಣೇಶ್ ಅಂಚನ್, ಪುರುಷೋತ್ತಮ ಕಲ್ಲಾಪು, ಒವರ್ ಬ್ರಿಡ್ಜ್ ಕೊರಗಜ್ಜ ಸಮಿತಿ ಅಧ್ಯಕ್ಷ ನಾರಾಯಣ ರೈ, ಸಂಚಾಲಕ ರಾಜೇಶ್ ಕಾಪಿಕಾಡ್, ಹರ್ಬಲ್ ಲೈಫ್‌ನ ಸುಧಾಕರ, ಉದ್ಯಮಿ ರವಿ ಭಂಡಾರಿ ಗಣೇಶ ನಗರ, ಹಾಗೆಯೇ ಟ್ರಸ್ಟ್‌ನ ಪ್ರಮುಖರಾದ ಶವಿತ್ ಉಚ್ಚಿಲ್, ಪ್ರವೀಣ್ ಕೊಲ್ಯ, ಕೃಷ್ಣ ಪೊನ್ನತ್ತೋಡು ಹಾಗೂ ಶರತ್ ತೊಕ್ಕೊಟ್ಟು ಉಪಸ್ಥಿತರಿದ್ದು ಸಹಕರಿಸಿದರು.
ಜಾನಪದ ಪರಿಷತ್ ಸಂಘಟನಾ ಕಾರ್ಯದರ್ಶಿ ಕಿರಣ್ ಕೊಲ್ಯ ಕಾರ್ಯಕ್ರಮವನ್ನು ನಿರೂಪಿಸಿ, ನೆರೆದಿದ್ದವರಿಗೆ ಸಾಂಪ್ರದಾಯಿಕ ಆಚರಣೆಯ ಮಹತ್ವವನ್ನು ತಿಳಿಸಿದರು.

