ಕಡಬ : ಮನೆಯೊಳಗೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕಡಬ ತಾಲೂಕಿನ ರಾಮಕುಂಜ ಗ್ರಾಮದ ಶಾರದಾನಗರದಲ್ಲಿ ಆ.13ರಂದು ನಡೆದಿದೆ.
ಮೃತರನ್ನು ಮೂಲತಃ ಕಡಬ ತಾಲೂಕಿನ ಆಲಂಕಾರು ಗ್ರಾಮದ ಕಿನ್ನಿಗೋಳಿ ನಿವಾಸಿ ಸುಂದರ ಶೆಟ್ಟಿ (75) ಎಂದು ಗುರುತಿಸಲಾಗಿದೆ. ಕಳೆದ ಹಲವು ವರ್ಷಗಳಿಂದ ರಾಮಕುಂಜ ಗ್ರಾಮದ ಶಾರದಾನಗರದಲ್ಲಿ ಸರಕಾರದಿಂದ ಮಂಜೂರಾದ ನಿವೇಶನದಲ್ಲಿ ಮನೆ ನಿರ್ಮಿಸಿಕೊಂಡು ಪತ್ನಿಯೊಂದಿಗೆ ವಾಸಿಸುತ್ತಿದ್ದರು.
ಸುಮಾರು ಒಂದು ತಿಂಗಳ ಹಿಂದೆ ಅವರ ಪತ್ನಿ ಬೆಂಗಳೂರಿನಲ್ಲಿರುವ ಪುತ್ರನ ಮನೆಗೆ ತೆರಳಿದ್ದರು. ಹೀಗಾಗಿ ಸುಂದರ ಶೆಟ್ಟಿಯವರು ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು. ಆ.8ರಂದು ಅವರ ಹಿರಿಯ ಪುತ್ರ ಹಾಗೂ ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೋಮಸುಂದರ ಶೆಟ್ಟಿ ಅವರು ಮನೆಗೆ ತೆರಳಿ ತಂದೆಯನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿ ವಾಪಸ್ ಬಂದಿದ್ದರು.
ಕಳೆದ ಎರಡು–ಮೂರು ದಿನಗಳಿಂದ ಮನೆಯ ಬಾಗಿಲು ಮುಚ್ಚಿರುವುದನ್ನು ಗಮನಿಸಿದ ಸ್ಥಳೀಯರಿಗೆ ಅನುಮಾನ ಮೂಡಿದೆ. ಗುರುವಾರ ಮನೆಯ ಬಳಿ ತೆರಳಿದಾಗ ದುರ್ವಾಸನೆ ಬರುತ್ತಿರುವುದು ಗಮನಕ್ಕೆ ಬಂದಿದೆ. ಈ ವಿಚಾರವನ್ನು ಸೋಮಸುಂದರ ಶೆಟ್ಟಿಯವರಿಗೆ ತಿಳಿಸಿದ ಬಳಿಕ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಪಡೆದ ಕಡಬ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಮನೆಯೊಳಗಿನಿಂದ ಚಿಲಕ ಹಾಕಲಾಗಿದ್ದ ಹಿನ್ನೆಲೆಯಲ್ಲಿ ಬಾಗಿಲು ಮುರಿದು ಒಳ ಪ್ರವೇಶಿಸಿದಾಗ ಕೊಳೆತ ಸ್ಥಿತಿಯಲ್ಲಿ ಸುಂದರ ಶೆಟ್ಟಿಯವರ ಶವ ಪತ್ತೆಯಾಗಿದೆ. ಅವರು ಚಾಪೆಯಲ್ಲಿ ಮಲಗಿದ ಸ್ಥಿತಿಯಲ್ಲೇ ಮೃತಪಟ್ಟಿರುವುದು ಕಂಡುಬಂದಿದೆ.
ಸುಂದರ ಶೆಟ್ಟಿಯವರು ಹೃದಯಾಘಾತದಿಂದ ಮಲಗಿದ್ದಲ್ಲಿಯೇ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಸಾವಿಗೆ ನಿಖರ ಕಾರಣ ಮರಣೋತ್ತರ ಪರೀಕ್ಷೆಯ ಬಳಿಕ ತಿಳಿದುಬರಬೇಕಿದೆ.
ಈ ಕುರಿತು ಮೃತರ ಪುತ್ರ ಸೋಮಸುಂದರ ಶೆಟ್ಟಿ ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಮೃತರು ಪತ್ನಿ ಬೇಬಿ, ಪುತ್ರರಾದ ಸೋಮಸುಂದರ ಶೆಟ್ಟಿ, ಶಿವಪ್ರಸಾದ್ ಹಾಗೂ ಪುತ್ರಿ ಗೀತಾಲಕ್ಷ್ಮೀ ಅವರನ್ನು ಅಗಲಿದ್ದಾರೆ.

