ತುಳುವರ ಆಟಿ ತಿಂಗಳು ಆಗಸ್ಟ್ 17ರ ಸಂಕ್ರಮಣದವರೆಗೆ; ಚಾಂದ್ರಮಾನದಲ್ಲಿ ಈಗಾಗಲೇ ಶ್ರಾವಣ ಆರಂಭ
ಮಂಗಳೂರು : ಆಟಿ ತಿಂಗಳು ಮತ್ತು ಆಷಾಢ ತಿಂಗಳು ಒಂದೇ ಎಂಬ ತಪ್ಪು ಕಲ್ಪನೆ ಹಲವರಲ್ಲಿ ಕಂಡುಬರುತ್ತಿದೆ. ಆದರೆ ತುಳುವರ ಸಾಂಪ್ರದಾಯಿಕ ಕಾಲಗಣನೆ ಪ್ರಕಾರ ಆಟಿ ಹಾಗೂ ಆಷಾಢ ಎರಡು ವಿಭಿನ್ನ ಪದ್ಧತಿಗಳ ತಿಂಗಳುಗಳಾಗಿವೆ.
ತುಳುವರು ಸೌರಮಾನ ಕ್ಯಾಲೆಂಡರ್ ಅನ್ನು ಅನುಸರಿಸುತ್ತಾರೆ. ಈ ಪದ್ಧತಿಯಲ್ಲಿ ಸೂರ್ಯನ ಸಂಕ್ರಮಣವನ್ನು ಆಧಾರವಾಗಿಟ್ಟುಕೊಂಡು ತಿಂಗಳುಗಳು ಬದಲಾಗುತ್ತವೆ. ತುಳುವರ ಹೊಸ ವರ್ಷ ಬಿಸು ಪರ್ಬ (ಏಪ್ರಿಲ್ ಮಧ್ಯಭಾಗ) ದಿಂದ ಆರಂಭವಾಗುತ್ತದೆ. ತಿಂಗಳ ಮೊದಲ ದಿನವನ್ನು ಸಿಂಗೊಡೆ ಎಂದು, ಕೊನೆಯ ದಿನವನ್ನು ಸಂಕ್ರಮಣ ಎಂದು ಕರೆಯಲಾಗುತ್ತದೆ.
ಇನ್ನೊಂದೆಡೆ, ಚಾಂದ್ರಮಾನ ಪಂಚಾಂಗ ಅಮಾವಾಸ್ಯೆಯಿಂದ ಅಮಾವಾಸ್ಯೆಗೆ ತಿಂಗಳುಗಳನ್ನು ಲೆಕ್ಕ ಹಾಕುತ್ತದೆ. ಈ ಪದ್ಧತಿಯ ಪ್ರಕಾರ ಆಷಾಢ ತಿಂಗಳು ಈಗಾಗಲೇ ಮುಗಿದು, ಶ್ರಾವಣ ಮಾಸ ಆರಂಭವಾಗಿದೆ.
ಆದರೆ ತುಳುವರ ಸೌರಮಾನ ಪದ್ಧತಿಯ ಪ್ರಕಾರ ಆಟಿ ತಿಂಗಳು ಇನ್ನೂ ಮುಗಿದಿಲ್ಲ. ಅದು ಆಗಸ್ಟ್ 17ರ ಸಂಕ್ರಮಣದಂದು ಅಂತ್ಯಗೊಳ್ಳಲಿದೆ. ಅದರ ಬಳಿಕವೇ ತುಳುವರ ಸೋಣ ತಿಂಗಳು ಆರಂಭವಾಗುತ್ತದೆ.
ಹೀಗಾಗಿ ಆಟಿ ಮತ್ತು ಆಷಾಢ ಒಂದೇ ಅಲ್ಲ ಎಂಬುದನ್ನು ಅರಿತು, ತುಳುವರ ಸಾಂಪ್ರದಾಯಿಕ ಕಾಲಗಣನೆಗೆ ಗೌರವ ನೀಡುವುದು ಅಗತ್ಯವಾಗಿದೆ.

