ಪಿಲಿಕುಳ ನಿಸರ್ಗಧಾಮ ದಲ್ಲಿ ತುಳುನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಪುನರ್ಜೀವನಗೊಳಿಸುವ ಉದ್ದೇಶದಿಂದ ಆಗಸ್ಟ್ 16ರಂದು ಆಟಿಕೂಟ ಕಾರ್ಯಕ್ರಮ ಆಯೋಜಿಸಲಾಗಿದೆ. ಸಂಸ್ಕೃತಿ ಗ್ರಾಮದ ಗುತ್ತು ಮನೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದ್ದು ಸಾಂಸ್ಕೃತಿಕ ಪರಂಪರೆ, ಜನಪದ ಆಚರಣೆ, ಆಹಾರ ಪದ್ಧತಿ, ಗ್ರಾಮೀಣ ಜೀವನಶೈಲಿ ಇತ್ಯಾದಿ ಎಲ್ಲಾ ಸಂಗತಿಗಳನ್ನು ನೆನಪು ಮಾಡಿಕೊಳ್ಳುವ ಅವಕಾಶವನ್ನು ಆಸಕ್ತರಿಗೆ ಒದಗಿಸಲಾಗಿದೆ.
ಸೊಪ್ಪು ತರಕಾರಿ ನೈಸರ್ಗಿಕ ಆಹಾರ ಪದಾರ್ಥಗಳನ್ನು ಬಳಸಿ ಔಷಧೀಯ ಗುಣಗಳನ್ನು ಹೊಂದಿರುವುದರಿಂದಾಗಿ ಜನರು ಆಟಿ ತಿಂಗಳಲ್ಲಿ ಸಾಂಪ್ರದಾಯಿಕ ಆಚರಣೆಗಳನ್ನು ನಡೆಸಿ ಉತ್ತಮ ಬದುಕನ್ನು ನಡೆಸುವ ರೂಢಿ ಇತ್ತು. ಇಂತಹ ಎಲ್ಲಾ ಆಚರಣೆಗಳನ್ನು ಇಂದಿನ ಯುವ ಜನತೆ ಮತ್ತು ಮಕ್ಕಳಿಗೆ ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಬಹಳ ವರ್ಷಗಳಿಂದ ನಿರಂತರವಾಗಿ ಆಯೋಜಿಸಿಕೊಂಡು ಬರಲಾಗುತ್ತಿದೆ.
ಈ ಬಾರಿ ಕೂಡ ವಿವಿಧ ಜನಪದ ಕಲೆ ಆಚರಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಟಿಕೂಟ ನಡೆಯಲಿದೆ. ಇದೇ ಸಂದರ್ಭ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಾಲಿಗ್ರಾಮ ಪಾರಂಪಳ್ಳಿ ಶ್ರೀ ಗುರು ಮಾರುತಿ ಹೌಂದೇರಾಯನ ಜನಪದ ನೃತ್ಯ ತಂಡದಿಂದ ಓಲಗ ನಡೆಯಲಿದೆ ಎಂದು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಅರುಣ್ ಕುಮಾರ್ ಶೆಟ್ಟಿ ಮತ್ತು ಶ್ರೀನಿಕೇತನ ಹಾಗೂ ಇತರರು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.
ವರದಿ ರಾಯಿ ರಾಜ ಕುಮಾರ್

