ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ

0
12

ಮಂಗಳೂರು : ಮಿಲಾಗ್ರಿಸ್ ಕಾಲೇಜಿನ ಗ್ರಂಥಾಲಯ ಸಂಘದ ವತಿಯಿಂದ ಕಾಲೇಜಿನಲ್ಲಿ ‘ರಾಷ್ಟ್ರೀಯ ಗ್ರಂಥಪಾಲಕರ ದಿನ’ವನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ‘ಪಿಂಗಾರ’ ಪತ್ರಿಕೆಯ ರೆಸಿಡೆಂಟ್ ಎಡಿಟರ್ ಹಾಗೂ ಸಿಇಒ ಮತ್ತು ಮಿಲಾಗ್ರಿಸ್ ಕಾಲೇಜಿನ ಹಳೆಯ ವಿದ್ಯಾರ್ಥಿನಿ ಕುಮಾರಿ ರಿಯಾನಾ ಡಿ’ಕುನ್ಹಾ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಆಧುನಿಕ ಗ್ರಂಥಾಲಯಗಳು ವಿದ್ಯಾರ್ಥಿಗಳ ಕಲಿಕೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗೆ ಪ್ರಮುಖ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ತಿಳಿಸಿದರು. ಸ್ಥಳೀಯ ಹಾಗೂ ಸ್ವಯಂ-ಪ್ರಕಟಿತ ಲೇಖಕರ ಕೃತಿಗಳನ್ನು ಸಂರಕ್ಷಿಸುವ ಮತ್ತು ಉತ್ತೇಜಿಸುವಲ್ಲಿ ಗ್ರಂಥಾಲಯಗಳ ಮಹತ್ವದ ಪಾತ್ರವಿದೆ ಎಂದರು.

ಮತ್ತೋರ್ವ ಮುಖ್ಯ ಅತಿಥಿ ಪ್ರಶಾಂತ್ ಕುಮಾರ್ ಜೈನ್ ಮಾತನಾಡಿ, ಓದುವಿಕೆಯ ನಾಲ್ಕು ಹಂತಗಳಾದ ಮೂಲಭೂತ ತಿಳುವಳಿಕೆ, ಮೇಲ್ನೋಟದ ಓದು ಮತ್ತು ವಿಶ್ಲೇಷಣೆ, ವಿಮರ್ಶಾತ್ಮಕ ಸಂವಾದ ಹಾಗೂ ವಿಷಯದ ಮೇಲಿನ ಪ್ರಭುತ್ವದ ಕುರಿತು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ವಂ. ಡಾ. ಆಲ್ವಿನ್ ಸೆರಾವೊ ಮಾತನಾಡಿ, ಓದುವಿಕೆಯಿಂದ ದೊರೆಯುವ ಬೌದ್ಧಿಕ ಪ್ರಯೋಜನಗಳನ್ನು ವಿವರಿಸಿದರು. ವಿದ್ಯಾರ್ಥಿಗಳು ಜಡತ್ವವನ್ನು ತೊರೆದು ಉತ್ತಮ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಗ್ರಂಥಾಲಯ ಕಾರ್ಯದರ್ಶಿ ಕುಮಾರಿ ಸ್ಪೂರ್ತಿ ಅವರು ಗ್ರಂಥಾಲಯ ವಿಜ್ಞಾನದ ಪಿತಾಮಹ ಡಾ. ಎಸ್.ಆರ್. ರಂಗನಾಥನ್ ಅವರ ದಿನದ ಮಹತ್ವದ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಚೇತನಾ ಕುಮಾರಿ ಕೆ., ಗ್ಲ್ಯಾನ್ಸಿಯಾ ಫರ್ನಾಂಡಿಸ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಗ್ರಂಥಪಾಲಕಿ ಪ್ರಮೀಳಾ ಡಿ’ಸೋಜಾ ಸ್ವಾಗತಿಸಿದರು. ಕುಮಾರಿ ಆಯಿಷಾ ಹನ್ನತ್ ಕಾರ್ಯಕ್ರಮ ನಿರೂಪಿಸಿದರು. ನಿಕೆಲ್ ಲೂಯಿಸ್ ವಂದನಾರ್ಪಣೆ ಸಲ್ಲಿಸಿದರು.