ನಿಸರ್ಗ, ಜನಜೀವನ ಬಾಂಧವ್ಯ ನೆನಪಿಸುವ ಆಟಿ: ನವೀನ್ ಪಡೀಲ್

0
8

ಮಂಗಳೂರು : ತುಳುನಾಡಿನ ತುಳು ವಂಶಜರ ಸಂಪ್ರದಾಯ, ಸಂಸ್ಕೃತಿಯಲ್ಲಿ ಆಟಿ (ಆಷಾಢ ಮಾಸ)ಗೆ ವಿಶೇಷ ಸ್ಥಾನಮಾನವಿದೆ. ಆಟಿ ಎಂದರೆ ಆಧ್ಯಾತ್ಮಿಕ ಮತ್ತು ಧಾರ್ಮಿಕ ಆಚರಣೆಯ ಮಾಸ. ಕಷ್ಟ ನಷ್ಟದ ತಿಂಗಳಿನ ನಿಸರ್ಗ ಮತ್ತು ಜನಜೀವನದ ನಡುವಿನ ಅಪಾರ ಬಾಂಧವ್ಯವನ್ನು ನೆನಪಿಸುವ ಕಾಲ. ಧಾರಾಕಾರವಾಗಿ ಸುರಿಯುವ ಮಳೆ, ಕೃಷಿ ಕೆಲಸ ಕಾರ್ಯ ಮುಗಿಸಿ ಪ್ರಕೃತಿ ವಿಶ್ರಾಂತಿ ಪಡೆಯುವ ಸಮಯದಲ್ಲಿ ನಮ್ಮ ಪೂರ್ವಜರು ಪ್ರಕೃತಿ, ನೈಸರ್ಗಿಕ ವಾತಾವರಣದ ಮೇಲಿನ ಪ್ರೀತಿಯಿಂದ ಸಂಕಷ್ಟದ ದಿನಗಳನ್ನು ಸಂಭ್ರಮದಿಂದ ಆಚರಿಸುತ್ತಿದ್ದರು ಎಂದು ಖ್ಯಾತ ತುಳು ಚಲನಚಿತ್ರ ನಟ ನವೀನ್ ಡಿ. ಪಡಿಲ್ ಮಾಹಿತಿ ನೀಡಿದ್ದಾರೆ.

ಅವರು ರೋಟರಿ ಕ್ಲಬ್ ಮಂಗಳೂರು ಸಿಟಿ, ರೋಟರಿ ಕ್ಲಬ್ ಮಂಗಳೂರು ಸೀ ಸೈಡ್, ರೋಟರಿ ಕ್ಲಬ್ ಮಂಗಳೂರು ಡೌನ್ ಟೌನ್ ಸಂಯುಕ್ತ ಆಶ್ರಯದಲ್ಲಿ ದಿ. 13.08.26ರಂದು ನಗರದ ಯೆಯ್ಯಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಸಣ್ಣ ಕೈಗಾರಿಕಾ ಕೇಂದ್ರದ ಕೆ.ಎಸ್. ರಾವ್ ಸಭಾಂಗಣದಲ್ಲಿ ಆಯೋಜಿಸಿದ “ಆಟಿದ ನೆಂಪು” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಆಟಿಕೂಟದಲ್ಲಿ ಕೇವಲ ಆಟಿಯ ನೆನಪು ಮಾಡಬೇಕೇ ವಿನಃ ಆಂಟಿಯ ನೆನಪು ಮಾಡಬಾರದು ಎಂದು ಹಾಸ್ಯ ಚಟಾಕಿ ಹಾರಿಸಿದರು.

ಈ ಸಂದರ್ಭದಲ್ಲಿ ಅವರು ತುಳು ಚಲನಚಿತ್ರ ಕ್ಷೇತ್ರಕ್ಕೆ ಸಲ್ಲಿಸಿದ ಅನುಪಮ ಸೇವೆ, ನೀಡಿದ ಅಮೂಲ್ಯ ಕೊಡುಗೆಯನ್ನು ಪರಿಗಣಿಸಿ ಅವರನ್ನು ಸನ್ಮಾನಿಸಲಾಯಿತು.

ರೋಟರಿ ಜಿಲ್ಲಾ 3181ರ ಗವರ್ನರ್ ಸತೀಶ್ ಬೋಳಾರ್ ಅವರು ಗೌರವ ಅತಿಥಿಯಾಗಿ ಪಾಲ್ಗೊಂಡು, ಆಟಿಯ ಆಚಾರ ವಿಚಾರ, ಉದ್ದೇಶ ಮತ್ತು ಮಹತ್ವವನ್ನು ವಿವರಿಸಿ, ಈ ಕಾಲದಲ್ಲಿ ದೈವಾರಾಧನೆ ಮತ್ತು ನಿಸರ್ಗ ಆರಾಧನೆಯ ಮಹತ್ವವನ್ನು ತಿಳಿಸಿದರು. ಅಲ್ಲದೆ, ರೋಟರಿ ಜಿಲ್ಲಾ ಎಲ್ಲ ಕಾರ್ಯಕ್ರಮಗಳಲ್ಲಿ ಸದಸ್ಯರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ವಿನಂತಿಸಿದರು.

ರೋಟರಿ ಮಂಗಳೂರು ಸಿಟಿ ಸಂಸ್ಥೆಯ ಅಧ್ಯಕ್ಷ ಸನ್ನಿತ್ ಶೇಟ್ ಸ್ವಾಗತಿಸಿ, ಕ್ಲಬ್‌ನ ಸಮಾಜಸೇವಾ ಯೋಜನೆಯ ಅಂಗವಾಗಿ ನಗರದ ಬೆಸೆಂಟ್ ಮಹಿಳಾ ಕಾಲೇಜಿನ ಅಂತಿಮ ಬಿಎ ಪದವಿ ವಿದ್ಯಾರ್ಥಿನಿ ವೆರೋನಿಸಾ ಅವರಿಗೆ 20,000 ರು. ವಿದ್ಯಾರ್ಥಿ ವೇತನ ವಿತರಿಸಿದರು. ನಗರದ ರಿಯಾ ಪ್ರತಿಷ್ಠಾನಕ್ಕೆ 50,000 ರು. ಮೌಲ್ಯದ ಪೀಠೋಪಕರಣಗಳನ್ನು ದಾನದ ರೂಪದಲ್ಲಿ ನೀಡಲಾಯಿತು.

ರೋಟರಿ ಮಂಗಳೂರು ಸೀ ಸೈಡ್ ಅಧ್ಯಕ್ಷರಾದ ಕಿರಣ್ ಕುಮಾರ್ ಅವರು ತಮ್ಮ ಸಂಸ್ಥೆಗೆ ಗಣೇಶ್ ಶೆಟ್ಟಿ, ಪ್ರಸಾದ್ ಸಾಲಿಯಾನ್, ಗೋವಿಂದರಾಜ್, ಡಾ. ವೀಣಾ ಶೆಟ್ಟಿಗಾರ್ ಹಾಗೂ ರೋಶನಿ ಮೋನಿಕಾ ಗೋವಿಯಸ್ ಅವರನ್ನು ನೂತನ ಸದಸ್ಯರನ್ನಾಗಿ ಸೇರ್ಪಡೆಗೊಳಿಸಿದರು.

ಸಹಾಯಕ ಗವರ್ನರ್ ಡಾ. ಅರವಿಂದ್ ರಾವ್ ಅವರು ಹೀರಾಚಂದ್ ಕರ್ಕೇರ ಸಂಪಾದಕತ್ವದ ಸೀ ಸೈಡ್ ಸಂಸ್ಥೆಯ ಗೃಹ ಪತ್ರಿಕೆ “ಸಮುದ್ರ ವಾಹಿನಿ” ಯನ್ನು ಅನಾವರಣಗೊಳಿಸಿದರು.

ವೇದಿಕೆಯಲ್ಲಿ ರೋಟರಿ ಡೌನ್ ಟೌನ್ ಸಂಸ್ಥೆಯ ಅಧ್ಯಕ್ಷ ಉಮೇಶ್ ಗಟ್ಟಿ, ಸಹಾಯಕ ಗವರ್ನರ್ ರಾಜೇಶ್ ಶೆಟ್ಟಿ, ಸಿಟಿ ಸಂಸ್ಥೆಯ ಸ್ಥಾಪನಾಧ್ಯಕ್ಷ ಡಾ. ರಂಜನ್, ಕಾರ್ಯದರ್ಶಿ ನಿತಿನ್ ದೇವಾಡಿಗ, ಮಾಜಿ ಅಧ್ಯಕ್ಷ ಸುಮಿತ್ ರಾವ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಿಟಿ ಸಂಸ್ಥೆಯ ಸ್ಥಾಪಕಾಧ್ಯಕ್ಷ ಡಾ. ರಂಜನ್ ಅವರು ಅಂತಾರಾಷ್ಟ್ರೀಯ ಸಂಸ್ಥೆಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಸನ್ಮಾನಿಸಲಾಯಿತು.

ರೋಟರಿ ಸೀ ಸೈಡ್ ಸಂಸ್ಥೆಯ ಆಶ್ರಯದಲ್ಲಿ ಆ. 30ರಂದು ಮಂಗಳೂರಿನ ಎಸ್‌ಡಿಎಂ ಕಾನೂನು ಮಹಾವಿದ್ಯಾಲಯದ ಸಭಾಂಗಣದಲ್ಲಿ ಶಿಕ್ಷಕರಿಗಾಗಿ “ಗುರುವಂದನಾ” ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ರೋಟರಿ ಸೀ ಸೈಡ್ ಅಧ್ಯಕ್ಷ ಕಿರಣ್ ಕುಮಾರ್ ಪ್ರಕಟಿಸಿ, ವಂದಿಸಿದರು.