ಪ್ರೀತಿಸಿ ಮದುವೆಯಾಗಿದ್ದ ದಂಪತಿ ದಾರುಣ ಅಂತ್ಯಕ್ಕೆ : ಕೌಟುಂಬಿಕ ಕಲಹವೇ ಕಾರಣ?

0
97

ಬೆಳ್ತಂಗಡಿ : ಬೆಂಗಳೂರು ನಗರದ ರಾಜರಾಜೇಶ್ವರಿ ನಗರದಲ್ಲಿ ಬೆಳ್ತಂಗಡಿ ಮೂಲದ ಯುವಕನೋರ್ವ ಕೌಟುಂಬಿಕ ಕಲಹದ ಬಳಿಕ ಪತ್ನಿಯನ್ನು ಕತ್ತು ಹಿಸುಕಿ ಕೊಂದು, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಆ.13ರಂದು ಮಧ್ಯರಾತ್ರಿ ನಡೆದಿದೆ.

ಮೃತರನ್ನು ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಎಳನೀರು ನಿವಾಸಿ, ಸಿವಿಲ್ ಎಂಜಿನಿಯರ್ ಸುಮಂತ್ ಜೈನ್ (32) ಹಾಗೂ ಹುಬ್ಬಳ್ಳಿ ಮೂಲದ ಪದ್ಮಾವತಿ (29) ಎಂದು ಗುರುತಿಸಲಾಗಿದೆ. ಪದ್ಮಾವತಿ ಅವರು ವೈಟ್‌ಫೀಲ್ಡ್ ಸಮೀಪದ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದರು.

ಮಾಹಿತಿ ಪ್ರಕಾರ, ಆ.13ರ ಮಧ್ಯರಾತ್ರಿ ದಂಪತಿ ನಡುವೆ ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿ ಜಗಳ ನಡೆದಿದ್ದು, ಬಳಿಕ ಗಲಾಟೆ ವಿಕೋಪಕ್ಕೆ ತಿರುಗಿದೆ ಎನ್ನಲಾಗಿದೆ. ಈ ವೇಳೆ ಸುಮಂತ್ ಜೈನ್ ಅವರು ಪತ್ನಿ ಪದ್ಮಾವತಿ ಅವರನ್ನು ಕತ್ತು ಹಿಸುಕಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

ಆತ್ಮಹತ್ಯೆಗೂ ಮುನ್ನ ಸುಮಂತ್ ಅವರು ತನ್ನ ತಾಯಿಗೆ ವಾಯ್ಸ್ ಮೆಸೇಜ್ ಕಳುಹಿಸಿದ್ದು, ತಾನು ಸಾಯುತ್ತಿರುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ. ಅಲ್ಲದೆ, ತನ್ನ ಪಿಎಫ್ ಹಣ ಹಾಗೂ ಮನೆಯಲ್ಲಿರುವ ಕೆಲವು ವಸ್ತುಗಳನ್ನು ತೆಗೆದುಕೊಂಡು ಹೋಗುವಂತೆ ತಿಳಿಸಿದ್ದಾನೆ ಎಂಬ ಮಾಹಿತಿಯೂ ಲಭ್ಯವಾಗಿದೆ.

ಆ.14ರಂದು ಕುಟುಂಬದವರು ಬೆಂಗಳೂರಿನ ಮನೆಗೆ ತೆರಳಿ ನೋಡಿದಾಗ ದಂಪತಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಕೂಡಲೇ ರಾಜಗೋಪಾಲನಗರ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸುಮಂತ್ ಜೈನ್ ಹಾಗೂ ಪದ್ಮಾವತಿ ಅವರು ಸುಮಾರು ಮೂರು ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ಕಳೆದ ಒಂದೂವರೆ ವರ್ಷದಿಂದ ಬೆಂಗಳೂರಿನಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ಇತ್ತೀಚೆಗೆ ದಂಪತಿ ನಡುವೆ ಕೌಟುಂಬಿಕ ವಿಚಾರವಾಗಿ ಗಲಾಟೆ ನಡೆಯುತ್ತಿತ್ತು ಎಂಬ ಮಾಹಿತಿಯೂ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಲಭ್ಯವಾಗಿದೆ.

ಘಟನೆಯ ಮಾಹಿತಿ ತಿಳಿದು ಪೊಲೀಸರು ಹಾಗೂ ಎಸ್‌ಎಫ್‌ಎಲ್ ತಂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದೆ. ಮನೆಯಲ್ಲಿನ ಪರಿಸ್ಥಿತಿ, ಲಭ್ಯವಿರುವ ಸಾಕ್ಷ್ಯಗಳು ಹಾಗೂ ಇತರ ಅಂಶಗಳ ಕುರಿತು ತನಿಖೆ ಮುಂದುವರಿದಿದೆ.

ಮೃತದೇಹಗಳ ಮಹಜರು ಹಾಗೂ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ನಿಖರ ಕಾರಣವೇನು ಎಂಬುದರ ಕುರಿತು ರಾಜರಾಜೇಶ್ವರಿ ನಗರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.