ಕಾಪು : ಜೇಸಿಐ ಕಾಪು ಘಟಕದ ವತಿಯಿಂದ 80ನೇ ಸ್ವಾತಂತ್ರ್ಯೋತ್ಸವವನ್ನು ಕಾಪು ಜೇಸಿ ಭವನದಲ್ಲಿ ಸಂಭ್ರಮ ಮತ್ತು ಸಡಗರದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಜೇಸಿಐ ಕಾಪು ಘಟಕದ ಪೂರ್ವಾಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಘಟಕದ ಅಧ್ಯಕ್ಷ ಜೇಸಿ ವಿಕ್ಕಿ ಪೂಜಾರಿ ಮಡುಂಬು ಅವರು ಧ್ವಜಾರೋಹಣ ನೆರವೇರಿಸಿದರು.
ಪೂರ್ವಾಧ್ಯಕ್ಷರಾದ ಜೇಸಿ ಸುಧಾಕರ್ ಸಾಲ್ಯಾನ್ ಅವರು ಧ್ವಜಗೀತೆ ಹಾಗೂ ರಾಷ್ಟ್ರಗೀತೆಯನ್ನು ಹಾಡಿದರು. ಬಳಿಕ ಸ್ವಾತಂತ್ರ್ಯ ದಿನಾಚರಣೆಯ ಮಹತ್ವ ಹಾಗೂ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ತ್ಯಾಗವನ್ನು ಸ್ಮರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಸದಸ್ಯರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ದೇಶದ ಏಕತೆ, ಅಖಂಡತೆ ಹಾಗೂ ಸೌಹಾರ್ದತೆಯನ್ನು ಕಾಪಾಡುವ ಸಂಕಲ್ಪ ಮಾಡಿದರು.
ಉಪಾಧ್ಯಕ್ಷ ಜೇಸಿ ಕಾರ್ತಿಕ್ ಆಚಾರ್ಯ ಅವರು ಉಪಸ್ಥಿತರಿದ್ದವರಿಗೆ ಸಿಹಿ ವಿತರಿಸಿದರು. ಜೇಸಿಐ ಕಾಪು ಘಟಕದ ಪದಾಧಿಕಾರಿಗಳು, ಪೂರ್ವಾಧ್ಯಕ್ಷರು ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ಹಂಚಿಕೊಂಡರು.

