ರಾ.ಹೆ. ಬಾಕಿ ಕಾಮಗಾರಿ ತ್ವರಿತ ಗತಿಯಲ್ಲಿ ಪೂರ್ಣಗೊಳಿಸಲು ಸಂಸದ ಕೋಟಾ ಸೂಚನೆ

0
6

ಉಡುಪಿ: ಜಿಲ್ಲೆಯಲ್ಲಿ ಸಾರ್ವಜನಿಕರ ಸುರಕ್ಷತೆ, ಸುಗಮ ಸಂಚಾರ ಹಾಗೂ ರಸ್ತೆ ಅಪಘಾತಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ರಾ. ಹೆ. ಬಾಕಿ ಇರುವ ಸರ್ವೀಸ್ ರಸ್ತೆ ಮತ್ತು ಇತರ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ, ಸಾರ್ವಜನಿಕರ ಉಪಯೋಗಕ್ಕೆ ಅನುವು ಮಾಡಿಕೊಡಬೇಕು ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದರು.
ಮಣಿಪಾಲ ರಜತಾದ್ರಿಯ ಸಂಸದರ ಕಚೇರಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66 ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66 ಕ್ಕೆ ಸಂಬAಧಿಸಿದಂತೆ ಪ್ರಮುಖವಾಗಿ ಕೋಟೇಶ್ವರ ಜಂಕ್ಷನ್‌ನಿಂದ ಬೀಜಾಡಿ ಕ್ರಾಸ್ ವರೆಗಿನ ಸುಮಾರು 830 ಮೀಟರ್, ಅನ್ನಪೂರ್ಣ ಹೋಟೆಲ್‌ನಿಂದ ಬೀಜಾಡಿ–ಕುಂಭಾಶಿ–ತೆಕ್ಕಟ್ಟೆ ಭಾಗದಲ್ಲಿ ಎರಡು ಬದಿ ಸುಮಾರು 3,500 ಮೀಟರ್, ತೆಕ್ಕಟ್ಟೆ ಭಾಗದಲ್ಲಿ ಸುಮಾರು 1,020 ಮೀಟರ್, ಬ್ರಹ್ಮಾವರ ಭಾಗದಲ್ಲಿ ಸುಮಾರು 400 ಮೀಟರ್, ಸಂತಕಟ್ಟೆ ಭಾಗದಲ್ಲಿ ಸುಮಾರು 1,000 ಮೀಟರ್, ಉದ್ಯಾವರ ಜಂಕ್ಷನ್ ಭಾಗದಲ್ಲಿ ಸುಮಾರು 325 ಮೀಟರ್ ಸೇರಿದಂತೆ ವಿವಿಧ ಭಾಗಗಳಲ್ಲಿ ಬಾಕಿ ಉಳಿದಿರುವ ಸರ್ವೀಸ್ ರಸ್ತೆ ನಿರ್ಮಾಣ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಪೂರ್ಣಗೊಳಿಸಿ, ಸಾರ್ವಜನಿಕ ವಾಹನಗಳು ಪ್ರಯಾಣಿಸಲು ಮುಕ್ತ ಅವಕಾಶ ಮಾಡಿಕೊಡಬೇಕು ಎಂದರು.
ರಾ.ಹೆ ಯ ಕೆಲವು ಕಡೆಗಳಲ್ಲಿ ಇನ್ನೂ ಸರ್ವೀಸ್ ರಸ್ತೆ ನಿರ್ಮಾಣ ಕಾಮಗಾರಿ ಪ್ರಾರಂಭಿಸಿಲ್ಲ. ಚರಂಡಿಗಳ ಅಸಮರ್ಪಕತೆಯೂ ಕಂಡುಬರುತ್ತಿದೆ. ಸರ್ವೀಸ್ ರಸ್ತೆ ನಿರ್ಮಾಣ ಮಾಡುವಾಗ ಕಾಮಗಾರಿಗಳ ಗುಣಮಟ್ಟ ಹಾಗೂ ಸಂಚಾರ ಸುರಕ್ಷತಾ ಕ್ರಮಗಳನ್ನು ಕಾಯ್ದುಕೊಳ್ಳುವುದರೊಂದಿಗೆ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕೆಂದು ಸೂಚಿಸಿದರು.
ಉಡುಪಿಯ ನಿಟ್ಟೂರು ಮತ್ತು ಬ್ರಹ್ಮಾವರದ ಮಹೇಶ್ ಹಾಸ್ಪಿಟಲ್ ಬಳಿ ಸ್ಥಳ ಪರಿಶೀಲಿಸಿ, ಸಾರ್ವಜನಿಕರ ಅಭಿಪ್ರಾಯ ಪಡೆದು ಫೂಟ್ ಓವರ್ ಬ್ರಿಡ್ಜ್ ನಿರ್ಮಾಣಕ್ಕೆ ಕೂಡಲೇ ಕ್ರಮವಹಿಸಲಾಗುವುದು. ಸಂತೆಕಟ್ಟೆ ಪೆಟ್ರೋಲ್ ಬಂಕ್‌ನಿಂದ ಅಂಬಾಗಿಲು ಜಂಕ್ಷನ್ ವರೆಗೆ ಸುಮಾರು ಒಂದು ಕಿ.ಮೀ ವ್ಯಾಪ್ತಿಯಲ್ಲಿ ಸರ್ವೀಸ್ ರಸ್ತೆ ನಿರ್ಮಾಣ ಕಾಮಗಾರಿಗೆ ಮರಗಳ ತೆರವು ಕಾರ್ಯ ಈಗಾಗಲೇ ಆರಂಭವಾಗಿದೆ. ಕಿನ್ನಿಮೂಲ್ಕಿ ಯಿಂದ ಅಂಬಲಪಾಡಿ ಸಂಪರ್ಕಿಸುವ ರಸ್ತೆಯು ತೀರಾ ಹಾಳಾಗಿದ್ದು, ತುರ್ತಾಗಿ ತಾತ್ಕಾಲಿಕ ದುರಸ್ಥಿ ಕಾರ್ಯ ಕೈಗೊಳ್ಳುವಂತೆ ಸೂಚಿಸಿದರು.
ಕೇರಳ ಮಾದರಿಯನ್ನು ಗಮನದಲ್ಲಿಟ್ಟುಕೊಂಡು ಕುಂದಾಪುರದಿಂದ ತಲಪಾಡಿಯವರೆಗೆ ಅಪಘಾತ ರಹಿತ ರಸ್ತೆ ನಿರ್ಮಾಣ ಮಾಡುವ ಚಿಂತನೆ ಇದೆ. ಕಟಪಾಡಿ ಅಂಡರ್‌ಪಾಸ್‌ನ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಈಗಾಗಲೇ ಒಂದು ಬದಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿರುತ್ತದೆ. ಇದರಿಂದ ವಾಹನ ದಟ್ಟಣೆ ಉಂಟಾಗುತ್ತಿದ್ದು, ವಾಹನಗಳ ಸುಗಮ ಸಂಚಾರಕ್ಕೆ ಅನಾನುಕೂಲವಾಗಿದೆ. ಇನ್ನೊಂದು ಬದಿಯ ಕಾಮಗಾರಿಯನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸುವುದರೊಂದಿಗೆ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದರು.
ಕೇಂದ್ರ ಸರ್ಕಾರದ ಸುತ್ತೋಲೆ ಹಾಗೂ ಸುಪ್ರೀಂ ಕೋರ್ಟ್ನ ಆದೇಶದಂತೆ ರಾ. ಹೆದ್ದಾರಿಯ ಮಧ್ಯಭಾಗದಿಂದ 75 ಮೀ. ಎರಡೂ ಬದಿಯಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡಬಾರದೆಂಬ ಸೂಚನೆ ಇದ್ದು, ಈ ಸಂಬಂಧ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ಕರೆದು ಕಾನೂನು ಚೌಕಟ್ಟಿನಲ್ಲಿ ಕೈಗೊಳ್ಳಬಹುದಾದ ಪರಿಹಾರ ಕ್ರಮಗಳನ್ನು ಚರ್ಚಿಸಲಾಗುವುದು ಎಂದರು.
ಸಭೆಯಲ್ಲಿ ಎನ್.ಹೆಚ್.ಎ.ಐ ಯೋಜನಾ ನಿರ್ದೇಶಕ ಅಬ್ದುಲ್ ಜಾವೇದ್ ಆಜ್ಮಿ, ಎನ್.ಹೆಚ್.ಎ.ಐ ಕನ್ಸಲ್‌ಟೆಂಟ್ ಪ್ರೆಸಿಡೆಂಟ್ ಇಂಜಿನಿಯರ್ ಅಲೋಕ್ ಎಂ, ಎನ್.ಹೆಚ್.ಎ.ಐ ಕನ್ಸಲ್‌ಟೆಂಟ್ ಟೀಮ್ ಲೀಡರ್ ಎನ್.ಆರ್ ಗೋಸ್ವಾಮಿ, ಧ್ರುವ್ ಕನ್ಸಲ್‌ಟೆನ್ಸಿಯ ಎ.ಹೆಚ್.ಇ ವಿಘ್ನೇಶ್ ಮತ್ತಿತರರು ಉಪಸ್ಥಿತರಿದ್ದರು.