ಬಂಟ್ವಾಳದಲ್ಲಿ ಹಾಡಹಗಲೇ ದರೋಡೆ : ತಲವಾರು ತೋರಿಸಿ ಲಕ್ಷಾಂತರ ರೂ. ದೋಚಿದ ದುಷ್ಕರ್ಮಿಗಳು

0
8

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮುಲ್ಕಾಜೆ ಮಾಡದಲ್ಲಿ ಹಾಡಹಗಲೇ ಬೈಕ್ ಸವಾರನನ್ನು ಅಡ್ಡಗಟ್ಟಿ ನಾಲ್ವರು ದುಷ್ಕರ್ಮಿಗಳು ದರೋಡೆ ನಡೆಸಿದ ಘಟನೆ ನಡೆದಿದೆ.

ಸುರತ್ಕಲ್ ನಿವಾಸಿ ಮಯ್ಯದಿ ಅವರು ವಿವಿಧ ಅಂಗಡಿಗಳಿಗೆ ಹೋಲ್‌ಸೇಲ್‌ನಲ್ಲಿ ನೀಡಿದ್ದ ಸಿಮೆಂಟ್‌ನ ಹಣವನ್ನು ವಸೂಲಿ ಮಾಡಿಕೊಂಡು ಹಿಂದಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಮಯ್ಯದಿ ಅವರನ್ನು ಅಡ್ಡಗಟ್ಟಿ ತಲವಾರು ತೋರಿಸಿ ಬೆದರಿಸಿದ್ದಾರೆ. ಬಳಿಕ ಅವರ ಬಳಿ ಇದ್ದ ಹಣದ ಬ್ಯಾಗ್‌ನ್ನು ದೋಚಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ದರೋಡೆಗೊಳಗಾದ ಬ್ಯಾಗ್‌ನಲ್ಲಿ ಸುಮಾರು ₹8 ಲಕ್ಷಕ್ಕೂ ಅಧಿಕ ಹಣ ಇತ್ತು ಎಂದು ತಿಳಿದುಬಂದಿದೆ.

ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದುಷ್ಕರ್ಮಿಗಳ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ. ಆರೋಪಿಗಳ ಚಲನವಲನ ಹಾಗೂ ಘಟನಾ ಸ್ಥಳದ ಸುತ್ತಮುತ್ತಲಿನ ಮಾಹಿತಿಯನ್ನು ಪೊಲೀಸರು ಕಲೆಹಾಕುತ್ತಿದ್ದಾರೆ.