ಉಳ್ಳಾಲ : ವಿದ್ಯಾರ್ಥಿಗಳು ದಿನಕ್ಕೆ ಕನಿಷ್ಠ ಅರ್ಧ ಗಂಟೆಯಾದರೂ ಶಿಕ್ಷಣ ಮಾರ್ಗದರ್ಶಿಯಲ್ಲಿರುವ ಮಾಹಿತಿಯನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಪತ್ರಿಕೆಯನ್ನು ಓದಿ ಮುಗಿದ ಬಳಿಕ ಕಸದ ಬುಟ್ಟಿಗೆ ಎಸೆಯದೆ, ಅದರಲ್ಲಿರುವ ಉಪಯುಕ್ತ ಮಾಹಿತಿಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಖ್ಯಾತ ದಂತ ವೈದ್ಯ, ಸಾಮಾಜಿಕ ಚಿಂತಕ ಡಾ.ಮುರಲೀ ಮೋಹನ ಚೂಂತಾರು ಹೇಳಿದರು.

ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ಸಹಭಾಗಿತ್ವದಲ್ಲಿ ಸರಕಾರಿ ಪ್ರೌಢ ಶಾಲೆ ಸೋಮೇಶ್ವರ ಉಚ್ಚಿಲ ಇಲ್ಲಿನ 10ನೇ ತರಗತಿ ವಿದ್ಯಾರ್ಥಿಗಳಿಗೆ ಕನ್ನಡಪ್ರಭ ದಿನಪತ್ರಿಕೆಯ ವತಿಯಿಂದ ಪ್ರಕಟವಾಗುವ ಶಿಕ್ಷಣ ಮಾರ್ಗದರ್ಶಿಯ ಉಚಿತ ವಿತರಣೆ ಕಾರ್ಯಕ್ರಮವನ್ನು ಗುರುವಾರ ಹಮ್ಮಿಕೊಳ್ಳಲಾಗಿತ್ತು.
ಶಿಕ್ಷಣ ಮಾರ್ಗದರ್ಶಿಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಂಬಂಧಿಸಿದ ಹಿಂದಿನ ಪ್ರಶ್ನೆಪತ್ರಿಕೆಗಳಲ್ಲಿನ ಪ್ರಶ್ನೆಗಳು ಹಾಗೂ ಅವುಗಳ ಉತ್ತರಗಳನ್ನು ನೀಡಲಾಗಿದೆ. ಹಿಂದಿನ ವರ್ಷಗಳಲ್ಲಿ ಪರೀಕ್ಷೆಗೆ ಬಂದಿರುವ ಪ್ರಶ್ನೆಗಳನ್ನು ಗಮನಿಸಿ ಅಭ್ಯಾಸ ಮಾಡುವುದರಿಂದ ಪರೀಕ್ಷೆಗೆ ಸಿದ್ಧತೆ ನಡೆಸಲು ವಿದ್ಯಾರ್ಥಿಗಳಿಗೆ ಹೆಚ್ಚಿನ ನೆರವಾಗಲಿದೆ ಎಂದರು.
ಕೇವಲ ಪಠ್ಯಪುಸ್ತಕದಲ್ಲಿರುವ ಮಾಹಿತಿಯನ್ನು ಕಲಿಯುವುದರಿಂದ ಮಾತ್ರ ಸಾಕಾಗುವುದಿಲ್ಲ. ಶಿಕ್ಷಕರು ಪಠ್ಯಪುಸ್ತಕದಲ್ಲಿರುವ ವಿಷಯಗಳನ್ನು ಬೋಧಿಸುತ್ತಾರೆ. ಆದರೆ ಶಿಕ್ಷಣ ಮಾರ್ಗದರ್ಶಿಯಲ್ಲಿ ಹಿಂದಿನ ಪ್ರಶ್ನೆಪತ್ರಿಕೆಗಳನ್ನು ಪರಿಶೀಲಿಸಿ, ಯಾವ ರೀತಿಯ ಪ್ರಶ್ನೆಗಳು ಪರೀಕ್ಷೆಯಲ್ಲಿ ಕೇಳಲ್ಪಟ್ಟಿವೆ ಎಂಬುದನ್ನು ತಿಳಿದುಕೊಂಡು ಪ್ರಶ್ನೋತ್ತರಗಳ ಮೂಲಕ ಅಭ್ಯಾಸ ಮಾಡಲು ಅವಕಾಶವಿದೆ. ಪ್ರತಿದಿನ ಅರ್ಧ ಗಂಟೆಯನ್ನು ಇದಕ್ಕಾಗಿ ಮೀಸಲಿಟ್ಟರೆ ಪರೀಕ್ಷೆ ಬರೆಯಲು ಆತ್ಮವಿಶ್ವಾಸ ಹೆಚ್ಚುವುದರ ಜೊತೆಗೆ ಸಾಮಾನ್ಯ ಜ್ಞಾನವೂ ವೃದ್ಧಿಯಾಗುತ್ತದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಚಂಚಲಾಕ್ಷಿ ಯು ಹಾಗೂ ಕನ್ನಡಪ್ರಭ ಪತ್ರಿಕೆಯ ವರದಿಗಾರರಾದ ವಜ್ರ ಗುಜರನ್ ಉಪಸ್ಥಿತರಿದ್ದರು.
ದಿನದ ಅರ್ಧ ಗಂಟೆಯನ್ನು ಶಿಕ್ಷಣ ಮಾರ್ಗದರ್ಶಿಯ ಅಧ್ಯಯನಕ್ಕೆ ಮೀಸಲಿಡಿ. ನಿತ್ಯ ಆಟ, ಊಟ, ನಿದ್ರೆಯಂತೆ ಅಧ್ಯಯನವೂ ನಿಮ್ಮ ದಿನಚರಿಯ ಭಾಗವಾಗಲಿ. ಪತ್ರಿಕೆಯಲ್ಲಿರುವ ಮಾಹಿತಿಯನ್ನು ಓದುವ ಮೂಲಕ ನಿಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳಿ.
ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಿ 600ಕ್ಕೂ ಅಧಿಕ ಅಂಕಗಳನ್ನು ಗಳಿಸುವ ವಿದ್ಯಾರ್ಥಿಗಳನ್ನು ವಿಶೇಷ ಬಹುಮಾನದೊಂದಿಗೆ ಸನ್ಮಾನಿಸಲಾಗುವುದು.

