ಬೆಂಗಳೂರು : ತುಳುನಾಡಿನ ಕಲೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಬೆಂಗಳೂರಿನಲ್ಲಿ ಉಳಿಸಿ ಬೆಳೆಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಸಂಪಾಜೆ ರಂಗ ಸಂಗಮ (ರಿ.), ಬೆಂಗಳೂರು ಸಂಸ್ಥೆಯ ವಾರ್ಷಿಕೋತ್ಸವದ ಅಂಗವಾಗಿ ‘ಸಂಪಾಜೆ ಸಾಂಸ್ಕೃತಿಕ ಸಂಭ್ರಮ-2’ ಕಾರ್ಯಕ್ರಮವನ್ನು ಆ.23ರಂದು ಅದ್ಧೂರಿಯಾಗಿ ಆಯೋಜಿಸಲಾಗಿದೆ.
ಆದಿತ್ಯವಾರ ಬೆಳಗ್ಗೆ 9 ಗಂಟೆಗೆ ನಗರದ ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ ನಡೆಯಲಿದೆ. ಪ್ರಶಸ್ತಿ ಪ್ರದಾನ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಪ್ರತಿಭಾ ಪುರಸ್ಕಾರ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಸಂಭ್ರಮಕ್ಕೆ ಮೆರುಗು ನೀಡಲಿವೆ.
ಕಾರ್ಯಕ್ರಮವನ್ನು ಉಡುಪಿ ದೊಡ್ಡಣಗುಡ್ಡೆಯ ಶ್ರೀ ದುರ್ಗಾ ಆದಿಶಕ್ತಿ ದೇವಸ್ಥಾನದ ಧರ್ಮದರ್ಶಿ ರಮಾನಂದ ಗುರೂಜಿ ಉದ್ಘಾಟಿಸಲಿದ್ದು, ಖ್ಯಾತ ಗಾಯಕ ಶಶಿಧರ್ ಕೋಟೆ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತ ಹಾಗೂ ಚಿತ್ರ ನಿರ್ದೇಶಕ ರಮೇಶ್ ಸುವರ್ಣ, ಬಿ.ಎಸ್.ಪಿ.ಆರ್.ಎಲ್‌ನ ಎಚ್.ಆರ್. ಅಧಿಕಾರಿ ಲೋಹಿತ್ ಎನ್., ಅಖಿಲ ಭಾರತ ದೈವರಾಧಕರ ಒಕ್ಕೂಟದ (ರಿ.) ಕೇಂದ್ರೀಯ ಉಡುಪಿ ಜಿಲ್ಲೆಯ ಸಂಸ್ಥಾಪಕ ಅಧ್ಯಕ್ಷ, ‘ನಮ್ಮ ಉಡುಪಿ ಟಿವಿ’ಯ ಪ್ರವರ್ತಕ ಹಾಗೂ ವಿ.ಎಸ್. ಗ್ರೂಪ್ ಮತ್ತು ಮಹಾಗಣಪತಿ ಸೌಹಾರ್ದ ಸಹಕಾರಿ ನಿಯಮಿತದ ನಿರ್ದೇಶಕ ವಿನೋದ್ ಶೆಟ್ಟಿ, ಮಹಿಳಾ ಉದ್ಯಮಿ ಹಾಗೂ ಸಮಾಜ ಸೇವಕಿ ವಿದ್ಯಾಲತಾ ಶೆಟ್ಟಿ ಬನ್ನಂಜೆ ಭಾಗವಹಿಸಲಿದ್ದಾರೆ.
ಬೆಂಗಳೂರಿನಲ್ಲಿ ನೆಲೆಸಿರುವ ಕರಾವಳಿ ಹಾಗೂ ತುಳುನಾಡಿನ ಬಂಧುಗಳಿಗೆ ತಮ್ಮ ನೆಲದ ಕಲೆ, ಸಂಸ್ಕೃತಿ ಮತ್ತು ಪರಂಪರೆಯ ಸೊಗಡನ್ನು ಪರಿಚಯಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಜೊತೆಗೆ ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗೌರವಿಸುವ ಕಾರ್ಯಕ್ರಮವೂ ನಡೆಯಲಿದೆ.
ತುಳುನಾಡಿನ ಸಾಂಸ್ಕೃತಿಕ ವೈಭವವನ್ನು ಬೆಂಗಳೂರಿನಲ್ಲಿ ಅನಾವರಣಗೊಳಿಸುವ ಈ ವಿಶೇಷ ಕಾರ್ಯಕ್ರಮಕ್ಕೆ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಸಂಪಾಜೆ ರಂಗ ಸಂಗಮ (ರಿ.)ದ ಸಂಸ್ಥಾಪಕ ರಾಜ್ ಸಂಪಾಜೆ ಅವರು ಮನವಿ ಮಾಡಿದ್ದಾರೆ.
ವರದಿ: ವಿನೋದ್ ಶೆಟ್ಟಿ, ಉಡುಪಿ

