ತುಳುವ ಮಹಾಸಭೆ ಇಂಟರ್‌ನ್ಯಾಷನಲ್ ಸಿಂಗಾಪುರ ಘಟಕದ ಅಧ್ಯಕ್ಷರಾಗಿ ನಿತ್ಯಾನಂದ ಹೆಗ್ಡೆ ನೇಮಕ

0
9

ಮಂಗಳೂರು : 2028ರಲ್ಲಿ ಶತಮಾನೋತ್ಸವವನ್ನು ಆಚರಿಸಲಿರುವ ಐತಿಹಾಸಿಕ ತುಳುವ ಮಹಾಸಭೆಯ ಜಾಗತಿಕ ಸಂಘಟನೆಯಾದ ತುಳುವ ಮಹಾಸಭೆ ಇಂಟರ್‌ನ್ಯಾಷನಲ್ ತನ್ನ ಅಂತರರಾಷ್ಟ್ರೀಯ ಸಂಘಟನಾ ವಿಸ್ತರಣೆಯ ಅಂಗವಾಗಿ ಸಿಂಗಾಪುರ ಘಟಕದ ಅಧ್ಯಕ್ಷರಾಗಿ ನಿತ್ಯಾನಂದ ಹೆಗ್ಡೆ ಅವರನ್ನು ನೇಮಕ ಮಾಡಿದೆ.

ಮೂಲತಃ ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ಕಂಠಾಡಿಗುತ್ತು ಬರಂಗರೆ ಮೂಲದ ನಿತ್ಯಾನಂದ ಹೆಗ್ಡೆ ಅವರು ಮೆಕ್ಯಾನಿಕಲ್ ಇಂಜಿನಿಯರಿಂಗ್ ಶಿಕ್ಷಣವನ್ನು ಭಾರತದಲ್ಲಿ ಪಡೆದು, ಸಿಂಗಾಪುರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಬೆಂಗಳೂರಿನಲ್ಲಿ ವೃತ್ತಿಜೀವನ ಆರಂಭಿಸಿದ ಅವರು 1993ರಲ್ಲಿ ಸಿಂಗಾಪುರಕ್ಕೆ ತೆರಳಿ, ಕಳೆದ ಮೂರು ದಶಕಗಳಿಂದ ಜಾಗತಿಕ ಅರೆವಾಹಕ ಉದ್ಯಮ ಕ್ಷೇತ್ರದಲ್ಲಿ ವೃತ್ತಿಜೀವನ ನಡೆಸುತ್ತಿದ್ದಾರೆ. ಪ್ರಸ್ತುತ ಸಿಂಗಾಪುರದ ಪ್ರಮುಖ ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ಅರೆವಾಹಕ ಉದ್ಯಮ ವಿಭಾಗದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವೃತ್ತಿಜೀವನದ ಜೊತೆಗೆ ಸಮುದಾಯ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿರುವ ನಿತ್ಯಾನಂದ ಹೆಗ್ಡೆ ಅವರು 2022ರಲ್ಲಿ ರಾಜೇಶ್ ಆಚಾರ್ಯ ಅವರೊಂದಿಗೆ ತುಳುವರ್ ಸಿಂಗಾಪುರ ಲಿಮಿಟೆಡ್ ಸಂಸ್ಥೆಯನ್ನು ಸಹಸ್ಥಾಪಿಸಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತುಳುವರನ್ನು ಒಗ್ಗೂಡಿಸುವುದು ಹಾಗೂ ತುಳು ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಸ್ಥಳೀಯ ಸಮುದಾಯಗಳೊಂದಿಗೆ ಬೆಳೆಸುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ.

ಸಿಂಗಾಪುರದ ಸಮುದಾಯ ಅಭಿವೃದ್ಧಿಯಲ್ಲಿಯೂ ಅವರು ಸಕ್ರಿಯರಾಗಿದ್ದು, 2016ರಿಂದ ಸಮುದಾಯ ಕ್ರೀಡಾ ಜಾಲದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ರೀಡೆ, ಸಾಂಸ್ಕೃತಿಕ ಭಾಗವಹಿಸುವಿಕೆ ಹಾಗೂ ಸಮುದಾಯದ ನಡುವಿನ ಬಾಂಧವ್ಯವನ್ನು ಬಲಪಡಿಸುವ ಹಲವು ಚಟುವಟಿಕೆಗಳಿಗೆ ಅವರು ಬೆಂಬಲ ನೀಡುತ್ತಿದ್ದಾರೆ. ಭಾರತೀಯ ಪರಂಪರೆ, ಕಲೆ ಹಾಗೂ ವಿವಿಧ ಪ್ರಾದೇಶಿಕ ಸಂಸ್ಕೃತಿಗಳ ಪ್ರಚಾರದಲ್ಲಿ ತೊಡಗಿರುವ ಎಟಿಎಎಂ ಸಂಘಟನೆಯಲ್ಲಿಯೂ ಸಮುದಾಯ ನಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ತುಳು ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ನಿತ್ಯಾನಂದ ಹೆಗ್ಡೆ ಅವರು ಜಾಗತಿಕವಾಗಿ ತುಳುವರನ್ನು ಒಗ್ಗೂಡಿಸಿ, ಮುಂದಿನ ಪೀಳಿಗೆಗೆ ತುಳುವರ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ದೃಷ್ಟಿಕೋನ ಹೊಂದಿದ್ದಾರೆ. ದೀರ್ಘದೂರದ ಓಟ ಹಾಗೂ ಪ್ರವಾಸದ ಆಸಕ್ತಿಯನ್ನೂ ಹೊಂದಿರುವ ಅವರು ವಿವಿಧ ಸಂಸ್ಕೃತಿಗಳನ್ನು ಅರಿತುಕೊಂಡು ಸಮುದಾಯಗಳೊಂದಿಗೆ ಸಂಪರ್ಕ ಬೆಳೆಸುವ ಕಾರ್ಯದಲ್ಲಿಯೂ ತೊಡಗಿಸಿಕೊಂಡಿದ್ದಾರೆ.

ಸಿಂಗಾಪುರದಲ್ಲಿ ತುಳುವರ ಸಂಘಟನೆಯನ್ನು ಮತ್ತಷ್ಟು ಬಲಪಡಿಸಿ, ತುಳು ಭಾಷೆ, ಕಲೆ, ಸಂಸ್ಕೃತಿ ಹಾಗೂ ಪರಂಪರೆಯ ಸಂರಕ್ಷಣೆ ಮತ್ತು ಮುಂದಿನ ಪೀಳಿಗೆಗೆ ಅದರ ಪರಿಚಯಿಸುವ ಕಾರ್ಯಕ್ಕೆ ಆದ್ಯತೆ ನೀಡುವ ಉದ್ದೇಶದಿಂದ ತುಳುವ ಮಹಾಸಭೆ ಇಂಟರ್‌ನ್ಯಾಷನಲ್‌ನ ಅಂತರರಾಷ್ಟ್ರೀಯ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ ಅವರು ನಿತ್ಯಾನಂದ ಹೆಗ್ಡೆ ಅವರನ್ನು ಸಿಂಗಾಪುರ ಘಟಕದ ಅಧ್ಯಕ್ಷರಾಗಿ ನೇಮಕಗೊಳಿಸಿದ್ದಾರೆ.

ಈ ನೇಮಕವನ್ನು ತುಳುವರ್ಲ್ಡ್ ಫೌಂಡೇಶನ್‌ನ ಗೌರವಾಧ್ಯಕ್ಷರಾದ ಶ್ರೀಹರಿನಾರಾಯಣದಾಸ ಅಸ್ರಣ್ಣ ಕಟೀಲ್, ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು, ಕಾರ್ಯದರ್ಶಿ ವಸಂತ ರೈ ಕುತ್ತೇತ್ತೂರು, ನಿರ್ದೇಶಕ ಡಾ. ರಾಜೇಶ್ ಕೃಷ್ಣ ಆಳ್ವ ಹಾಗೂ ತುಳುವ ಮಹಾಸಭೆ ಇಂಟರ್‌ನ್ಯಾಷನಲ್‌ನ ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷ ದೇವೇಂದ್ರ ಹೆಗ್ಗಡೆ ಕೊಕ್ರಾಡಿ, ಕೇಂದ್ರೀಯ ಸಮಿತಿ ಅಧ್ಯಕ್ಷ ಡಾ. ಅವಿನ್ ಬಿ. ಆರ್. ಆಳ್ವ, ಕೇಂದ್ರೀಯ ಸಮಿತಿ ಕಾರ್ಯದರ್ಶಿ ಅರವಿಂದ ಬೆಲ್ಚಾಡ ಅವರು ಹರ್ಷದಿಂದ ಸ್ವಾಗತಿಸಿ, ನೂತನ ಸಿಂಗಾಪುರ ಘಟಕದ ಅಧ್ಯಕ್ಷರಾದ ನಿತ್ಯಾನಂದ ಹೆಗ್ಡೆ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಶುಭಹಾರೈಕೆಗಳನ್ನು ಸಲ್ಲಿಸಿದ್ದಾರೆ.