ಉಡುಪಿ : ಜಾಗ ಖರೀದಿಸುವ ಉದ್ದೇಶದಿಂದ ಉಡುಪಿಗೆ ಬಂದಿದ್ದ ಕೇರಳ ಮೂಲದ 37 ವರ್ಷದ ಮಹಿಳೆಯೊಬ್ಬರಿಗೆ ಸೈಬರ್ ವಂಚಕರು ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ ₹4 ಲಕ್ಷ ವಂಚಿಸಿರುವ ಘಟನೆ ನಡೆದಿದೆ.
ಕೇರಳ ಮೂಲದ ಶ್ರುತಿ ವಿ. (37) ಅವರು ಜಾಗ ಖರೀದಿಸುವ ಸಲುವಾಗಿ ಉಡುಪಿಗೆ ಬಂದಿದ್ದರು. ಈ ವೇಳೆ ಕಟಪಾಡಿಯ ರಮಾನಂದ ಶೆಟ್ಟಿ ಅವರಿಗೆ ಮೂರು ಚೆಕ್‌ಗಳನ್ನು ನೀಡಿದ್ದರು. ಚೆಕ್‌ಗಳನ್ನು ಪಾಸ್ ಮಾಡುವ ಕುರಿತು ಮಾಹಿತಿ ಪಡೆಯಲು ಆ.19ರಂದು ಗೂಗಲ್ ಮೂಲಕ ಬ್ಯಾಂಕ್‌ನ ಸಂಪರ್ಕ ಸಂಖ್ಯೆ ಹುಡುಕಿದ್ದರು.
ಗೂಗಲ್‌ನಲ್ಲಿ ದೊರೆತ 08409615973 ಸಂಖ್ಯೆಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿದ ವ್ಯಕ್ತಿ ತಾನು ಬ್ಯಾಂಕ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ಬಳಿಕ ಬ್ಯಾಂಕ್‌ಗೆ ಸಂಬಂಧಿಸಿದಂತೆ ಒಂದು ಲಿಂಕ್ ಕಳುಹಿಸಿ ಅದನ್ನು ತೆರೆಯುವಂತೆ ಸೂಚಿಸಿದ್ದಾನೆ ಎನ್ನಲಾಗಿದೆ.
ವಂಚಕನ ಸೂಚನೆಯಂತೆ ಶ್ರುತಿ ಅವರು ಲಿಂಕ್‌ನ್ನು ತೆರೆದು YONO ಆ್ಯಪ್ ಮೂಲಕ ‘Proceed’ ಮಾಡುವಂತೆ ತಿಳಿಸಿದ ಹಿನ್ನೆಲೆಯಲ್ಲಿ ₹4 ಲಕ್ಷದ ವಹಿವಾಟು ನಡೆಸಿದ್ದಾರೆ. ಕೆಲವೇ ಸಮಯದ ಬಳಿಕ ಅವರ ಬ್ಯಾಂಕ್ ಖಾತೆಯಿಂದ ₹4 ಲಕ್ಷ ಹಣ ವರ್ಗಾವಣೆಯಾಗಿರುವುದು ಗಮನಕ್ಕೆ ಬಂದಿದೆ.
ತಕ್ಷಣವೇ ಶ್ರುತಿ ಅವರು ಎಸ್‌ಬಿಐ ಬ್ಯಾಂಕ್‌ಗೆ ತೆರಳಿ ವಿಚಾರಿಸಿದಾಗ ತಾವು ಸೈಬರ್ ವಂಚನೆಗೆ ಒಳಗಾಗಿರುವುದು ತಿಳಿದುಬಂದಿದೆ.
ಈ ಕುರಿತು ಸೈಬರ್ ವಂಚಕರು ಹಣ ವಂಚಿಸಿರುವುದಾಗಿ ಶ್ರುತಿ ಅವರು ನೀಡಿದ ದೂರಿನ ಮೇರೆಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

