ನವದೆಹಲಿ : ಸಾರ್ವಜನಿಕರ ಸಮ್ಮುಖದಲ್ಲಿ ಅಥವಾ ಸಾರ್ವಜನಿಕರ ವೀಕ್ಷಣೆಗೆ ಒಳಪಡುವ ಸ್ಥಳದಲ್ಲಿ ಜಾತಿ ನಿಂದನೆ ನಡೆದಿರುವುದು ಸಾಬೀತಾದಲ್ಲಿ ಮಾತ್ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ (SC/ST ಕಾಯ್ದೆ) ಅಡಿಯಲ್ಲಿ ಪ್ರಕರಣ ಅನ್ವಯಿಸಬಹುದು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠವು ಉತ್ತರ ಪ್ರದೇಶದ ಶಾಲೆಯೊಂದರ ಮ್ಯಾನೇಜರ್ ವಿರುದ್ಧ ದಾಖಲಾಗಿದ್ದ ಪ್ರಕರಣದ ವಿಚಾರಣೆ ನಡೆಸುವ ಸಂದರ್ಭದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಪ್ರಕರಣದ ಎಫ್‌ಐಆರ್‌ನಲ್ಲಿ ಶಾಲಾ ಮ್ಯಾನೇಜರ್ ಜಾತಿ ನಿಂದನೆ ಮಾಡಿದ್ದಾರೆ ಎಂಬ ಆರೋಪ ಮಾಡಲಾಗಿತ್ತು. ಆದರೆ ಆರೋಪಕ್ಕೆ ಪೂರಕವಾಗಿ ನಿರ್ದಿಷ್ಟ ಹಾಗೂ ಸಮರ್ಪಕ ಸಾಕ್ಷ್ಯಗಳು ಇಲ್ಲದಿರುವುದನ್ನು ನ್ಯಾಯಾಲಯ ಗಮನಿಸಿದೆ.
ಈ ಹಿನ್ನೆಲೆಯಲ್ಲಿ SC/ST ಕಾಯ್ದೆಯಡಿ ಮ್ಯಾನೇಜರ್ ವಿರುದ್ಧ ನಡೆಯುತ್ತಿದ್ದ ಕಾನೂನು ಪ್ರಕ್ರಿಯೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.
ಜಾತಿ ನಿಂದನೆ ಖಾಸಗಿ ಸ್ಥಳದಲ್ಲಿ ಹಾಗೂ ಸಾರ್ವಜನಿಕರ ಉಪಸ್ಥಿತಿ ಅಥವಾ ವೀಕ್ಷಣೆ ಇಲ್ಲದೆ ನಡೆದಿದ್ದರೆ, ಅಂತಹ ಮಾತುಕತೆಯನ್ನು ‘ಸಾರ್ವಜನಿಕ ವೀಕ್ಷಣೆಯ ಸ್ಥಳ’ದಲ್ಲಿ ನಡೆದ ಘಟನೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
SC/ST ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲು, ಆರೋಪಿತ ಜಾತಿ ನಿಂದನೆ ಸಾರ್ವಜನಿಕರ ಸಮ್ಮುಖದಲ್ಲಿ ಅಥವಾ ಸಾರ್ವಜನಿಕರ ವೀಕ್ಷಣೆಗೆ ಒಳಪಡುವ ಸ್ಥಳದಲ್ಲಿ ನಡೆದಿರುವುದು ಪ್ರಮುಖ ಅಂಶವಾಗಿದೆ ಎಂದು ಪೀಠ ತಿಳಿಸಿದೆ.
ಈ ಪ್ರಕರಣದಲ್ಲಿ ಆರೋಪಕ್ಕೆ ಅಗತ್ಯವಾದ ಅಂಶಗಳು ಮತ್ತು ಪೂರಕ ಸಾಕ್ಷ್ಯಗಳು ಸ್ಪಷ್ಟವಾಗಿ ಕಂಡುಬರದ ಹಿನ್ನೆಲೆಯಲ್ಲಿ, ಆರೋಪಿಯ ವಿರುದ್ಧದ ಮುಂದಿನ ಕಾನೂನು ಕ್ರಮವನ್ನು ಮುಂದುವರಿಸುವುದು ಸಮರ್ಥನೀಯವಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಸುಪ್ರೀಂ ಕೋರ್ಟ್‌ನ ಈ ತೀರ್ಪು SC/ST ಕಾಯ್ದೆಯಡಿ ದಾಖಲಾಗುವ ಪ್ರಕರಣಗಳಲ್ಲಿ ಆರೋಪದ ಸ್ವರೂಪ ಹಾಗೂ ಘಟನೆ ನಡೆದ ಸ್ಥಳದ ಮಹತ್ವವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ.

