ಬೆಂಗಳೂರು : ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿರುವ ನಕಲಿ ಔಷಧ ಮಾರಾಟ ಜಾಲದ ಸಮಗ್ರ ತನಿಖೆಗಾಗಿ ರಾಜ್ಯ ಸರ್ಕಾರವು ಆರು ಮಂದಿ ಅಧಿಕಾರಿಗಳನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು (SIT) ರಚಿಸಿ ಆದೇಶ ಹೊರಡಿಸಿದೆ.
ಬೆಂಗಳೂರು ನಗರ ಪಶ್ಚಿಮ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಿ. ವಂಶಿಕೃಷ್ಣ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ಕಾರ್ಯನಿರ್ವಹಿಸಲಿದೆ. ನಕಲಿ ಔಷಧ ಜಾಲದ ಸಂಪೂರ್ಣ ಹಿನ್ನೆಲೆ, ಅದರಲ್ಲಿರುವ ವ್ಯಕ್ತಿಗಳು, ತಯಾರಿಕೆ ಹಾಗೂ ಸರಬರಾಜು ಮಾರ್ಗಗಳನ್ನು ಪತ್ತೆಹಚ್ಚುವ ಜವಾಬ್ದಾರಿಯನ್ನು SITಗೆ ನೀಡಲಾಗಿದೆ.
ಇತ್ತೀಚೆಗೆ ಬಿಡದಿ ಸಮೀಪ ಪ್ರತಿಷ್ಠಿತ ಔಷಧ ಕಂಪನಿಗಳ ಹೆಸರಿನಲ್ಲಿ ನಕಲಿ ಔಷಧಗಳನ್ನು ತಯಾರಿಸಿ, ಲೇಬಲ್ ಅಂಟಿಸಿ ಮಾರಾಟ ಮಾಡುತ್ತಿದ್ದ ಅಡ್ಡೆ ಮೇಲೆ ಆರೋಗ್ಯ ಇಲಾಖೆ ಹಾಗೂ ಪೊಲೀಸರು ಜಂಟಿಯಾಗಿ ದಾಳಿ ನಡೆಸಿದ್ದರು. ಈ ವೇಳೆ ಬರೋಬ್ಬರಿ ₹4.91 ಕೋಟಿ ಮೌಲ್ಯದ ನಕಲಿ ಔಷಧಗಳನ್ನು ಜಪ್ತಿ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಕಲಿ ಔಷಧ ಜಾಲದ ಬೇರು ಪತ್ತೆಗೆ ತನಿಖೆ
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿರುವ ರಾಜ್ಯ ಸರ್ಕಾರ, ನಕಲಿ ಔಷಧ ಜಾಲದ ಹಿಂದೆ ಇರುವ ಪ್ರಮುಖ ವ್ಯಕ್ತಿಗಳು ಹಾಗೂ ಜಾಲದ ಕಾರ್ಯವ್ಯಾಪ್ತಿಯನ್ನು ಪತ್ತೆಹಚ್ಚಲು ಪೊಲೀಸ್ ಮತ್ತು ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ SIT ರಚಿಸಿದೆ.
SIT ತಂಡದ ವಿವರ
ಮುಖ್ಯಸ್ಥರು:
- ಸಿ. ವಂಶಿಕೃಷ್ಣ – ಜಂಟಿ ಪೊಲೀಸ್ ಆಯುಕ್ತರು, ಪಶ್ಚಿಮ ವಿಭಾಗ
ಸದಸ್ಯರು:
- ಶಿವಪ್ರಕಾಶ್ ದೇವರಾಜು – ಎಸ್ಪಿ
- ಲೋಕೇಶ್ ಬಿ. ಜಗಲಾಸರ್ – ಸಿಐಡಿ ಎಸ್ಪಿ
- ಮಂಜುನಾಥ್ ರೆಡ್ಡಿ – ಸಹಾಯಕ ಔಷಧ ನಿಯಂತ್ರಕರು
- ನಮ್ರತಾ ಹಲ್ಲೂರು – ಸಹಾಯಕ ಔಷಧ ನಿಯಂತ್ರಕರು
- ನೇಹಾ ಮುರ್ಗಿ – ಔಷಧ ನಿರೀಕ್ಷಕಿ
ಈ ವಿಶೇಷ ತನಿಖಾ ತಂಡದ ಸಂಪೂರ್ಣ ಮೇಲ್ವಿಚಾರಣೆಯನ್ನು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು (ಕಾನೂನು ಮತ್ತು ಸುವ್ಯವಸ್ಥೆ) ವಹಿಸಿಕೊಳ್ಳಲಿದ್ದಾರೆ.
ನಕಲಿ ಔಷಧಗಳ ತಯಾರಿಕೆ, ಪ್ಯಾಕಿಂಗ್ ಹಾಗೂ ಮಾರಾಟದ ಹಿಂದಿರುವ ಜಾಲವನ್ನು ಪತ್ತೆಹಚ್ಚುವುದರ ಜೊತೆಗೆ, ಈ ಪ್ರಕರಣಕ್ಕೆ ಅಂತರರಾಜ್ಯ ನಂಟು ಇದೆಯೇ ಎಂಬ ಬಗ್ಗೆಯೂ ತನಿಖೆ ನಡೆಯಲಿದೆ. ನಕಲಿ ಔಷಧಗಳ ಸರಬರಾಜು ಮಾರ್ಗ, ಮೂಲ ಹಾಗೂ ವಿತರಣಾ ಜಾಲದ ಕುರಿತು SIT ತನಿಖೆಯನ್ನು ಚುರುಕುಗೊಳಿಸಲಿದೆ.
ನಕಲಿ ಔಷಧಗಳು ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಜಾಲದ ಸಂಪೂರ್ಣ ಬೇರುಗಳನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ತನಿಖೆ ಮುಂದುವರಿಯಲಿದೆ.

