ಗುಂಡೂರಿ, ಬೆಳ್ತಂಗಡಿ : ರೋಟರಿ ಕ್ಲಬ್ ಸಿದ್ದಕಟ್ಟೆ ಫಲ್ಗುಣಿ ವತಿಯಿಂದ ಹಿರಿಯ ನಾಗರಿಕರ ದಿನಾಚರಣೆಯ ಅಂಗವಾಗಿ ವಿವಿಧ ಸೇವಾ ಕಾರ್ಯಕ್ರಮಗಳನ್ನು ಗುಂಡೂರಿ ಗ್ರಾಮದ ಶ್ರೀ ಗುರು ಚೈತನ್ಯ ಸೇವಾಶ್ರಮದಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು. ಹಿರಿಯ ನಾಗರಿಕರಿಗೆ ಸರ್ಕಾರದಿಂದ ದೊರೆಯುವ ವಿವಿಧ ಸವಲತ್ತುಗಳು, ಕಾನೂನು ಸೇವೆಗಳು ಹಾಗೂ ಆರೋಗ್ಯ ಮತ್ತು ಸಾಮಾಜಿಕ ಭದ್ರತೆಯ ಕುರಿತು ಮಾಹಿತಿ ಕಾರ್ಯಾಗಾರ ನಡೆಸುವುದರ ಜೊತೆಗೆ ಮನೋರಂಜನಾ ಕಾರ್ಯಕ್ರಮವನ್ನೂ ಆಯೋಜಿಸಲಾಗಿತ್ತು.
ಗುಂಡೂರಿ ಗ್ರಾಮದಲ್ಲಿನ ವೃದ್ಧ,ಅಬಲೆಯರ ಹಾಗೂ ರೋಗಿಗಳ ಪುನರ್ವಸತಿ ಕೇಂದ್ರವಾಗಿರುವ ಶ್ರೀ ಗುರು ಚೈತನ್ಯ ಸೇವಾಶ್ರಮದಲ್ಲಿ ನಡೆದ ಕಾರ್ಯಕ್ರಮವು ರೋಟರಿ ಕ್ಲಬ್ ಸಿದ್ದಕಟ್ಟೆ ಫಲ್ಗುಣಿಯ ಅಧ್ಯಕ್ಷೆ ರೊ. ಟೀನಾ ಡಿಕೋಸ್ತಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಹಿರಿಯ ನಾಗರಿಕರ ರಕ್ಷಣೆ ಹಾಗೂ ಸರ್ಕಾರದಿಂದ ದೊರೆಯುವ ವಿವಿಧ ಸವಲತ್ತುಗಳ ಕುರಿತು ಬೆಳ್ತಂಗಡಿ ತಾಲೂಕಿನ ಪಂಚಾಯತ್ ಸಂಯೋಜಕರಾದ ಜಯಾನಂದ ಅವರು ವಿವರವಾದ ಮಾಹಿತಿ ನೀಡಿದರು. ಹಿರಿಯ ನಾಗರಿಕರಿಗೆ ದೊರೆಯುವ ಉಚಿತ ಕಾನೂನು ಸೇವೆಗಳು ಹಾಗೂ ಅವುಗಳ ಸಾಧಕ-ಬಾಧಕಗಳ ಕುರಿತು ರೋಟರಿ ಕ್ಲಬ್ ಸಿದ್ದಕಟ್ಟೆ ಫಲ್ಗುಣಿಯ ರೊ. ಅಡ್ವೊಕೇಟ್ ಶಿವಯ್ಯ ಎಸ್.ಎಲ್. ಮಾಹಿತಿ ನೀಡಿದರು.
ಅಂತರಾಷ್ಟ್ರೀಯ ರೋಟರಿ ಸಂಸ್ಥೆಯ ಸೇವಾ ಚಟುವಟಿಕೆಗಳು ಹಾಗೂ ಪ್ರತಿಯೊಬ್ಬ ರೋಟರಿ ಸದಸ್ಯನ ಸೇವಾ ಪಾಲಿನ ಕುರಿತು ಹೊಕ್ಕಾಡಿಗೋಳಿಯ ಶ್ರೀ ಗುರು ಕಮ್ಯುನಿಕೇಶನ್‌ನ ಮಾಲಕರಾದ ರೊ. ರಾಘವೇಂದ್ರ ಭಟ್ ಸಮಗ್ರವಾಗಿ ವಿವರಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಗುರು ಚೈತನ್ಯದ ಹೊನ್ನಯ್ಯ ಕಾಟಿಪಳ್ಳ ಅವರು ಹಾಸ್ಯಪ್ರಜ್ಞೆಯ ಪ್ರಶ್ನೋತ್ತರ ಕಾರ್ಯಕ್ರಮವನ್ನು ನಡೆಸಿ ಹಿರಿಯರನ್ನು ರಂಜಿಸಿದರು.
ಹಿರಿಯ ಕೃಷಿಕ ಸಾಧಕರಿಗೆ ಗೌರವ
ಗುಂಡೂರಿ ಗ್ರಾಮದ ಹಿರಿಯ ಕೃಷಿಕ ಸಾಧಕರನ್ನು ವಿಶೇಷ ಬಿರುದುಗಳೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು.
“ಹಿರಿಯ ಕೃಷಿ ಶ್ರಮಿಕ” ಎಂಬ ಬಿರುದಿನೊಂದಿಗೆ ಪೊಕ್ಕಿ ಕೋಮ ಮನೆಯ ಅಚ್ಚುತ ಪೂಜಾರಿ ಅವರನ್ನು ಗೌರವಿಸಲಾಯಿತು.
“ಹಿರಿಯ ಕೃಷಿ ಸೇವಾ ಮಾಣಿಕ್ಯ” ಎಂಬ ಬಿರುದಿನೊಂದಿಗೆ ಕೊಡಂಗೆ ಮನೆಯ ಶಾಂತಿರಾಜ್ ಜೈನ್ ಅವರನ್ನು ಸನ್ಮಾನಿಸಲಾಯಿತು.
“ಹಿರಿಯ ಕೃಷಿ ಚೈತನ್ಯ” ಎಂಬ ಬಿರುದಿನೊಂದಿಗೆ ಮಿಯಲಾಜೆಯ ಶಾಂತ ನಾರಾಯಣ ಕುಲಾಲ್ ಅವರನ್ನು ಗೌರವಿಸಲಾಯಿತು.
ಇದರ ಜೊತೆಗೆ ಗ್ರಾಮದ ಇತರ ಹಿರಿಯ ಕೃಷಿಕರನ್ನೂ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಬೆಳ್ತಂಗಡಿ SBI ಬ್ಯಾಂಕಿನ ಅಡ್ವೈಸರ್ ವೇಣೂರಿನ ಬಾಲಕೃಷ್ಣ ಭಟ್, ಅರಂಬೋಡಿ ಪಂಚಾಯತ್ ಸದಸ್ಯ ಹರೀಶ್ ಪೂಜಾರಿ ಪೊಕ್ಕಿ, ರೋಟರಿ ಕ್ಲಬ್ ಸಿದ್ದಕಟ್ಟೆ ಫಲ್ಗುಣಿಯ ನಿಕಟಪೂರ್ವ ಅಧ್ಯಕ್ಷರಾದ ರೊ. ದುರ್ಗಾದಾಸ ಶೆಟ್ಟಿ, ವಲಯ ಸೇನಾನಿ ರೊ. ಮೋಹನ್ ಜಿ. ಮೂಲ್ಯ ಹಾಗೂ ರೋಟರಿ ಸದಸ್ಯರು ಮತ್ತು ಗಣ್ಯರು ಉಪಸ್ಥಿತರಿದ್ದರು.
ರೋಟರಿ ಕ್ಲಬ್ ಸಿದ್ದಕಟ್ಟೆ ಫಲ್ಗುಣಿಯ ಸ್ಥಾಪಕಾಧ್ಯಕ್ಷ ಹಾಗೂ ಪಿಂಕಿ ಎರೇಂಜರ್ ಮಾಲಕರಾದ ರೊ. ಮೈಕಲ್ ಡಿಕೋಸ್ತಾ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ರೊ. ರವೀಂದ್ರ ನಾಯಕ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕ್ಲಬ್‌ನ ಕಾರ್ಯದರ್ಶಿ ರೊ. ಪ್ರಮೀಳಾ ದುರ್ಗಾದಾಸ ಶೆಟ್ಟಿ ಅವರು ಧನ್ಯವಾದ ಸಮರ್ಪಿಸಿದರು.
ಹಿರಿಯ ನಾಗರಿಕರ ಗೌರವ, ಅವರ ಹಕ್ಕುಗಳ ಅರಿವು ಹಾಗೂ ಸಮಾಜದಲ್ಲಿ ಹಿರಿಯರ ಮಹತ್ವವನ್ನು ಸಾರಿದ ಈ ಕಾರ್ಯಕ್ರಮವು ಗುಂಡೂರಿ ಗ್ರಾಮದ ಹಿರಿಯರ ಮೆಚ್ಚುಗೆಗೆ ಪಾತ್ರವಾಯಿತು.

