ಚಿರತೆ ಸುಟ್ಟ ಪ್ರಕರಣ : ಮೂವರು ಅರೆಸ್ಟ್

0
37

ಉರುಳಿಗೆ ಸಿಲುಕಿ ಮೃತಪಟ್ಟಿದ್ದ ಚಿರತೆಯನ್ನು ಅರಣ್ಯ ಇಲಾಖೆಗೆ ಮಾಹಿತಿ ನೀಡದೆ ಗ್ರಾಮಸ್ಥರೇ ಸುಟ್ಟು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಮೂವರನ್ನು ಬಂಧಿಸಿರುವ ಘಟಣೆ ತುಮಕೂರು ತಾಲೂಕಿನ ಗೌರಗೊಂಡನಹಳ್ಳಿ ಗೇಟ್ ಬಳಿ ಸಂಭವಿಸಿದೆ.

ಗೌರಗೊಂಡನಹಳ್ಳಿಯ ಜಿ.ಡಿ. ಶಿವಕುಮಾರ್, ನಾರಾಯಣಪ್ಪ ಹಾಗೂ ಚಂದ್ರಶೇಖರ್ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ.

ಗ್ರಾಮದ ನಾರಾಯಣಪ್ಪ ಎಂಬವರು ಕಾಡುಪ್ರಾಣಿಗಳ ಹಾವಳಿ ತಪ್ಪಿಸುವ ಉದ್ದೇಶದಿಂದ ತಮ್ಮ ಜಮೀನಿನಲ್ಲಿ ಉರುಳು ಹಾಕಿದ್ದರು ಎನ್ನಲಾಗಿದೆ. ಈ ಉರುಳಿಗೆ ಚಿರತೆಯೊಂದು ಸಿಲುಕಿ ಮೃತಪಟ್ಟಿದೆ. ಚಿರತೆ ಮೃತಪಟ್ಟಿರುವ ವಿಚಾರವನ್ನು ಅರಣ್ಯ ಇಲಾಖೆಗೆ ತಿಳಿಸಿ, ನಿಯಮಾನುಸಾರ ಕ್ರಮ ಕೈಗೊಳ್ಳುವ ಬದಲು ಗ್ರಾಮಸ್ಥರು ಅದನ್ನು ಸ್ಥಳದಲ್ಲೇ ಸುಟ್ಟು ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಸತ್ತ ಚಿರತೆಯನ್ನು ಗ್ರಾಮಸ್ಥರು ಸುಡುತ್ತಿರುವ ದೃಶ್ಯವನ್ನು ಗ್ರಾಮದ ಕೆಲ ಯುವಕರು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ಬಂದಿದೆ.

ವಿಡಿಯೋ ಆಧರಿಸಿ ಪ್ರಕರಣದ ಕುರಿತು ತನಿಖೆ ಆರಂಭಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಗೌರಗೊಂಡನಹಳ್ಳಿ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಚಿರತೆಯಂತಹ ವನ್ಯಜೀವಿಗಳು ಉರುಳಿಗೆ ಸಿಲುಕಿ ಮೃತಪಟ್ಟ ಸಂದರ್ಭದಲ್ಲಿ ಅವುಗಳ ಮೃತದೇಹವನ್ನು ಸುಡುವುದು ಅಥವಾ ಸ್ಥಳಾಂತರಿಸುವ ಬದಲು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು. ಪ್ರಕರಣದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆಯೂ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.