ದೈವ ನುಡಿದ ಜಾಗದಲ್ಲೇ ಗೋಳಿ ಗಿಡ ಪತ್ತೆ : ಕೋರ್ದಬ್ಬು ದೈವದ ಕಾರಣಿಕಕ್ಕೆ ಸಾಕ್ಷಿಯಾದ ಅಪೂರ್ವ ಕ್ಷಣ

0
86

ಬಜಪೆ : ಪೊರ್ಕೋಡಿ ಕಾಂಜಾಗೋಳಿ ಶ್ರೀ ಕೋರ್ದಬ್ಬು ದೈವಸ್ಥಾನದ ಅಂಗಣದಲ್ಲಿದ್ದ ಪುರಾತನ ಆಲದ ಮರವೊಂದು ಇತ್ತೀಚೆಗೆ ಧರೆಗುರುಳಿದ್ದು, ಅದರ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಮತ್ತೊಂದು ಮರ ನೆಡುವ ಕುರಿತು ಚರ್ಚೆ ನಡೆದಿತ್ತು.

ಮೊನ್ನೆ ಕ್ಷೇತ್ರದಲ್ಲಿ ಕೋರ್ದಬ್ಬು ದೈವದ ದರ್ಶನ ನಡೆದ ಸಂದರ್ಭದಲ್ಲಿ, ಆಲದ ಮರದ ಬದಲಿಗೆ ಮತ್ತೊಂದು ಮರವನ್ನು ನೆಡುವ ಬಗ್ಗೆ ದೈವದಲ್ಲಿ ಅರಿಕೆ ಮಾಡಲಾಗಿತ್ತು. ಈ ವೇಳೆ, ಈಗಾಗಲೇ ನಿರ್ದಿಷ್ಟ ಸ್ಥಳವೊಂದರಲ್ಲಿ ತಾರಿ ಮರಕ್ಕೆ ಅಂಟಿಕೊಂಡಿರುವ ಗೋಳಿ ಮರದ ಗಿಡವೊಂದನ್ನು ಗುರುತಿಸಲಾಗಿದ್ದು, ಆ ಗಿಡದ ಮೇಲೆ ತನ್ನ ದೂತನಾದ ರಾಹುಗುಳಿಗ ದೈವದ ದೃಷ್ಟಿಯೂ ಇದೆ. ಅದೇ ಗಿಡವನ್ನು ತಂದು ದೈವಸ್ಥಾನದ ಆವರಣದಲ್ಲಿ ನೆಡಬೇಕು ಎಂದು ದೈವ ನುಡಿ ನೀಡಿತ್ತು ಎನ್ನಲಾಗಿದೆ.

ದೈವ ನುಡಿಯಂತೆ ಹುಡುಕಾಟ ನಡೆಸಿದಾಗ, ಸೂಚಿಸಲಾಗಿದ್ದ ಸ್ಥಳದಲ್ಲೇ ತಾರಿ ಮರಕ್ಕೆ ಅಂಟಿಕೊಂಡಿರುವ ಗೋಳಿ ಗಿಡ ಪತ್ತೆಯಾಗಿದ್ದು, ಇದರಿಂದ ಊರಿನ ಸಮಸ್ತರಲ್ಲಿ ಅಚ್ಚರಿ ಹಾಗೂ ಸಂತಸ ಮೂಡಿತು.

ಬಳಿಕ ಊರಿನ ಸಮಸ್ತರು ಒಗ್ಗೂಡಿ, ಬ್ಯಾಂಡ್‌ ವಾದ್ಯಗಳ ವಾಳಗದೊಂದಿಗೆ ಗೋಳಿ ಗಿಡವನ್ನು ಗೌರವಪೂರ್ವಕವಾಗಿ ದೈವಸ್ಥಾನಕ್ಕೆ ತಂದು, ಕೋರ್ದಬ್ಬು ದೈವಸ್ಥಾನದ ಅಂಗಣದಲ್ಲಿ ನೆಟ್ಟರು.

ದೈವ ನುಡಿದ ಸ್ಥಳದಲ್ಲೇ ಗಿಡ ಪತ್ತೆಯಾಗಿರುವುದು ಕ್ಷೇತ್ರದ ಭಕ್ತರು ಹಾಗೂ ಊರವರಲ್ಲಿ ದೈವದ ಕಾರಣಿಕದ ಬಗ್ಗೆ ಮತ್ತಷ್ಟು ನಂಬಿಕೆ ಮತ್ತು ಭಕ್ತಿಭಾವ ಮೂಡಿಸಿದೆ. ಈ ಅಪೂರ್ವ ಘಟನೆಯು ಸ್ಥಳೀಯರಲ್ಲಿ ವಿಶೇಷ ಚರ್ಚೆಗೆ ಕಾರಣವಾಗಿದೆ.