ಕಡಬ ಠಾಣಾ ವ್ಯಾಪ್ತಿಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕಿಯೊಬ್ಬಳು ನಾಪತ್ತೆಯಾಗಿದ್ದ ಪ್ರಕರಣಕ್ಕೆ ಇದೀಗ ತಿರುವು ಸಿಕ್ಕಿದ್ದು, ಬಾಲಕಿಯನ್ನು ಪತ್ತೆಹಚ್ಚಿದ ಬಳಿಕ ಯುವಕನೋರ್ವನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಆರೋಗ್ಯದ ಕಾರಣದಿಂದ ಶಾಲೆಗೆ ತೆರಳದೆ ಮನೆಯಲ್ಲಿದ್ದ ಬಾಲಕಿ, ಆಗಸ್ಟ್ 20ರಂದು ಶಾಲೆಯಿಂದ ಪ್ರವಾಸಕ್ಕೆ ತೆರಳುವುದಾಗಿ ತಿಳಿಸಿ ₹150 ಪಡೆದುಕೊಂಡು ಮನೆಯಿಂದ ಹೊರಟಿದ್ದಳು. ಬಳಿಕ ಮನೆಗೆ ವಾಪಸಾಗಿರಲಿಲ್ಲ. ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿದ್ದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಸಂಬಂಧಿಕರು ಹಾಗೂ ಪರಿಚಯಸ್ಥರಲ್ಲಿ ವಿಚಾರಿಸಿದರೂ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ. ಬಾಲಕಿಯನ್ನು ಯಾರೋ ಅಪಹರಿಸಿರುವ ಶಂಕೆ ವ್ಯಕ್ತಪಡಿಸಿ ಆಕೆಯ ತಾಯಿ ಕಡಬ ಪೊಲೀಸರಿಗೆ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಬಾಲಕಿಗೆ ಸಾಮಾಜಿಕ ಜಾಲತಾಣದ ಮೂಲಕ ಚನ್ನರಾಯಪಟ್ಟಣದ ದಿನೇಶ್ ಎಂಬ ಯುವಕನ ಪರಿಚಯವಾಗಿರುವುದು ತಿಳಿದುಬಂದಿದೆ. ಯುವಕ ಬಾಲಕಿಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ಬಳಿಕ ಚೆನ್ನರಾಯಪಟ್ಟಣಕ್ಕೆ ಕರೆದೊಯ್ದಿದ್ದ ಎನ್ನಲಾಗಿದೆ.
ತನಿಖೆಯ ಮುಂದುವರಿದ ಭಾಗವಾಗಿ ಕಡಬ ಪೊಲೀಸರು ಆಗಸ್ಟ್ 23ರಂದು ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲೂಕಿನ ವಳಗೆರೆ ಸೋಮನಹಳ್ಳಿ ಪ್ರದೇಶದಲ್ಲಿ ಬಾಲಕಿಯನ್ನು ಪತ್ತೆಹಚ್ಚಿ ಠಾಣೆಗೆ ಕರೆತಂದಿದ್ದಾರೆ. ವಿಚಾರಣೆ ವೇಳೆ ಬಾಲಕಿ ನೀಡಿದ ಹೇಳಿಕೆಯ ಆಧಾರದ ಮೇಲೆ ಪ್ರಕರಣದ ಅಸಲಿ ವಿಚಾರ ಬೆಳಕಿಗೆ ಬಂದಿದೆ.
ಬಾಲಕಿಯ ಹೇಳಿಕೆ ಹಾಗೂ ವೈದ್ಯಕೀಯ ಪರೀಕ್ಷೆಯ ವರದಿ ಆಧರಿಸಿ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದ ಹಿನ್ನೆಲೆಯಲ್ಲಿ ದಿನೇಶ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಕಡಬ ಪೊಲೀಸರು ಪ್ರಕರಣದ ಕುರಿತು ಮುಂದಿನ ತನಿಖೆ ಕೈಗೊಂಡಿದ್ದಾರೆ.

