ಕೇರಳ ಇನ್ನು ‘ಕೇರಳಂ’ : ಕೇಂದ್ರದಿಂದ ಅಧಿಕೃತ ಅಧಿಸೂಚನೆ

0
30

ನವದೆಹಲಿ: ದಕ್ಷಿಣ ಭಾರತದ ಪ್ರಮುಖ ರಾಜ್ಯವಾದ ಕೇರಳದ ಅಧಿಕೃತ ಹೆಸರನ್ನು ‘ಕೇರಳ’ದಿಂದ ‘ಕೇರಳಂ’ ಎಂದು ಬದಲಾಯಿಸಲಾಗಿದೆ. ಕೇಂದ್ರ ಗೃಹ ಸಚಿವಾಲಯವು ಆಗಸ್ಟ್ 25, 2026ರಿಂದ ‘ಕೇರಳ (ಹೆಸರು ಬದಲಾವಣೆ) ಕಾಯ್ದೆ, 2026’ ಜಾರಿಗೆ ಬರುವಂತೆ ಗೆಜೆಟ್ ಅಧಿಸೂಚನೆ ಹೊರಡಿಸಿದೆ.

ಈ ಮೂಲಕ ರಾಜ್ಯದ ಹೆಸರು ಬದಲಾವಣೆಯ ಪ್ರಕ್ರಿಯೆಯ ಅಂತಿಮ ಹಂತ ಪೂರ್ಣಗೊಂಡಿದ್ದು, ಇನ್ನು ಮುಂದೆ ಅಧಿಕೃತ ದಾಖಲೆಗಳಲ್ಲಿ ರಾಜ್ಯವನ್ನು ‘ಕೇರಳಂ’ ಎಂದು ಉಲ್ಲೇಖಿಸಲಾಗುತ್ತದೆ. ಕಾಯ್ದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಗಸ್ಟ್ 14ರಂದು ಅಂಕಿತ ಹಾಕಿದ್ದರು. ಲೋಕಸಭೆ ಆಗಸ್ಟ್ 11ರಂದು ಹಾಗೂ ರಾಜ್ಯಸಭೆ ಆಗಸ್ಟ್ 12ರಂದು ಮಸೂದೆಯನ್ನು ಅಂಗೀಕರಿಸಿತ್ತು.

ಮಲಯಾಳಂನಲ್ಲಿ ಮೊದಲಿನಿಂದಲೂ ‘ಕೇರಳಂ’

ಮಲಯಾಳಂ ಭಾಷೆಯಲ್ಲಿ ರಾಜ್ಯದ ಹೆಸರು ಮೊದಲಿನಿಂದಲೂ ‘ಕೇರಳಂ’ ಎಂದೇ ಬಳಕೆಯಲ್ಲಿದೆ. 1956ರ ನವೆಂಬರ್ 1ರಂದು ಭಾಷಾವಾರು ರಾಜ್ಯಗಳ ಪುನರ್‌ಸಂಘಟನೆಯ ಸಂದರ್ಭದಲ್ಲಿ ಮಲಯಾಳಂ ಮಾತನಾಡುವ ಪ್ರದೇಶಗಳನ್ನು ಒಗ್ಗೂಡಿಸಿ ರಾಜ್ಯ ರಚನೆಯಾದಾಗಲೂ ‘ಕೇರಳಂ’ ಎಂಬ ಹೆಸರೇ ಸ್ಥಳೀಯ ಬಳಕೆಯಲ್ಲಿತ್ತು. ಆದರೆ ಭಾರತದ ಸಂವಿಧಾನದ ಮೊದಲ ಅನುಸೂಚಿಯಲ್ಲಿ ರಾಜ್ಯದ ಹೆಸರು ‘ಕೇರಳ’ ಎಂದು ನಮೂದಿಸಲಾಗಿತ್ತು.

2024ರಲ್ಲಿ ವಿಧಾನಸಭೆಯಿಂದ ನಿರ್ಣಯ

ಸಂವಿಧಾನದ 3ನೇ ವಿಧಿಯಡಿ ರಾಜ್ಯದ ಹೆಸರನ್ನು ‘ಕೇರಳಂ’ ಎಂದು ಬದಲಾಯಿಸುವಂತೆ ಕೋರಿ 2024ರ ಜೂನ್ 24ರಂದು ಕೇರಳ ವಿಧಾನಸಭೆ ಸರ್ವಾನುಮತದ ನಿರ್ಣಯ ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿತ್ತು. ಬಳಿಕ ಕೇಂದ್ರ ಸರ್ಕಾರ ಪ್ರಸ್ತಾವನೆಯನ್ನು ಪರಿಶೀಲಿಸಿ, 2026ರಲ್ಲಿ ‘ಕೇರಳ (ಹೆಸರು ಬದಲಾವಣೆ) ಮಸೂದೆ’ಯನ್ನು ಸಂಸತ್ತಿನಲ್ಲಿ ಮಂಡಿಸಿತು.

ಒಂದು ವರ್ಷದೊಳಗೆ ಕಾನೂನುಗಳಲ್ಲಿ ಬದಲಾವಣೆ

ಹೆಸರು ಬದಲಾವಣೆ ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ‘ಸ್ಟೇಟ್ ಆಫ್ ಕೇರಳ’ ಎಂಬ ಉಲ್ಲೇಖವಿರುವ ಸಂಬಂಧಿತ ಕಾನೂನುಗಳು ಹಾಗೂ ದಾಖಲೆಗಳಲ್ಲಿ ಅಗತ್ಯ ತಿದ್ದುಪಡಿ ಮಾಡಲು ಸರ್ಕಾರಗಳಿಗೆ ಒಂದು ವರ್ಷದ ಅವಧಿ ನೀಡಲಾಗಿದೆ. ಕಾನೂನುಬದ್ಧವಾಗಿ ರಾಜ್ಯದ ಹೊಸ ಹೆಸರು ‘ಕೇರಳಂ’ ಆಗಿರುವುದರಿಂದ ಮುಂದಿನ ದಿನಗಳಲ್ಲಿ ಅಧಿಕೃತ ದಾಖಲೆಗಳು ಮತ್ತು ಆಡಳಿತಾತ್ಮಕ ಉಲ್ಲೇಖಗಳಲ್ಲೂ ಹೊಸ ಹೆಸರು ಅಳವಡಿಕೆಯಾಗಲಿದೆ.

ಈ ಮೂಲಕ ಮಲಯಾಳಂ ಭಾಷೆಯಲ್ಲಿ ದೀರ್ಘಕಾಲದಿಂದ ಬಳಕೆಯಲ್ಲಿದ್ದ ರಾಜ್ಯದ ಹೆಸರಿಗೆ ಅಧಿಕೃತ ಮಾನ್ಯತೆ ದೊರೆತಂತಾಗಿದೆ.