ಬೆಂಗಳೂರು : ನೇಪಾಳ ಮತ್ತು ಟಿಬೆಟ್ ಗಡಿ ಭಾಗದಲ್ಲಿ ಉಂಟಾಗಿರುವ ಭೀಕರ ಪ್ರವಾಹ ಹಾಗೂ ಭೂಕುಸಿತದ ಹಿನ್ನೆಲೆಯಲ್ಲಿ, ಅಲ್ಲಿನ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ಕನ್ನಡಿಗರ ಸುರಕ್ಷತೆ ಖಚಿತಪಡಿಸಲು ಕರ್ನಾಟಕ ಸರ್ಕಾರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.
ಪ್ರವಾಹ ಹಾಗೂ ಭೂಕುಸಿತದಿಂದ ಹಲವು ಪ್ರದೇಶಗಳಲ್ಲಿ ರಸ್ತೆ ಸಂಪರ್ಕ ಮತ್ತು ಸಂಚಾರ ವ್ಯವಸ್ಥೆ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದ್ದು, ಹಲವು ಭಾರತೀಯರು ನಾಪತ್ತೆಯಾಗಿರುವ ಕುರಿತು ವರದಿಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ರಕ್ಷಣಾ ಹಾಗೂ ಪರಿಹಾರ ಕಾರ್ಯಗಳಿಗೆ ಸಜ್ಜಾಗಿದೆ.
ನೇಪಾಳ ಅಥವಾ ಟಿಬೆಟ್ ಸ್ವಾಯತ್ತ ಪ್ರದೇಶದಲ್ಲಿ ಸಿಲುಕಿರುವ ಕನ್ನಡಿಗರ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸುವ ಕಾರ್ಯವನ್ನು ಸರ್ಕಾರ ಆರಂಭಿಸಿದೆ. ಸದ್ಯ ಪ್ರವಾಸ, ಉದ್ಯೋಗ ಅಥವಾ ಇತರ ಕಾರಣಗಳಿಂದ ಅಲ್ಲಿಗೆ ತೆರಳಿರುವ ಕನ್ನಡಿಗರ ಸುರಕ್ಷತೆ ಕುರಿತು ಮಾಹಿತಿ ಕಲೆಹಾಕಲಾಗುತ್ತಿದೆ.
ತಮ್ಮ ಸಂಬಂಧಿಕರು, ಸ್ನೇಹಿತರು ಅಥವಾ ಪರಿಚಿತರು ನೇಪಾಳ ಅಥವಾ ಟಿಬೆಟ್ ಪ್ರದೇಶದಲ್ಲಿ ಸಿಲುಕಿಕೊಂಡಿದ್ದರೆ, ಅವರ ಹೆಸರು, ಸಂಪರ್ಕ ಸಂಖ್ಯೆ, ಪ್ರಸ್ತುತ ಇರುವ ಸ್ಥಳ ಸೇರಿದಂತೆ ಲಭ್ಯವಿರುವ ವಿವರಗಳನ್ನು ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ಅಥವಾ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.
ಈ ಉದ್ದೇಶಕ್ಕಾಗಿ ಸರ್ಕಾರದ ವತಿಯಿಂದ ಗೂಗಲ್ ಫಾರಂ ಮೂಲಕವೂ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಸಾರ್ವಜನಿಕರು ತಮ್ಮ ಬಳಿ ಇರುವ ನಿಖರ ಮಾಹಿತಿಯನ್ನು ಫಾರಂನಲ್ಲಿ ದಾಖಲಿಸುವಂತೆ ಸೂಚಿಸಲಾಗಿದೆ.
ಸಂಗ್ರಹವಾಗುವ ಮಾಹಿತಿಯ ಆಧಾರದ ಮೇಲೆ ಸಿಲುಕಿರುವ ಕನ್ನಡಿಗರ ಸ್ಥಿತಿಗತಿ ಪತ್ತೆಹಚ್ಚಿ, ಅಗತ್ಯವಿರುವಲ್ಲಿ ರಕ್ಷಣಾ ಹಾಗೂ ಸ್ಥಳಾಂತರ ಕಾರ್ಯಕ್ಕೆ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಲಿದ್ದಾರೆ.
ಪ್ರವಾಹ ಮತ್ತು ಭೂಕುಸಿತದಂತಹ ತುರ್ತು ಪರಿಸ್ಥಿತಿಯಲ್ಲಿ ತಪ್ಪು ಮಾಹಿತಿ ಹರಡುವುದನ್ನು ತಪ್ಪಿಸಿ, ಸಿಲುಕಿರುವವರ ಕುರಿತು ಖಚಿತವಾದ ಮಾಹಿತಿಯನ್ನು ಮಾತ್ರ ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡುವಂತೆ ಮನವಿ ಮಾಡಲಾಗಿದೆ.

