ಐಫೋನ್ 18 ಪ್ರೊ ಸರಣಿಯಲ್ಲಿ ಭರ್ಜರಿ ಬದಲಾವಣೆ : ಹೊಸ ಫೀಚರ್‌ಗಳ ಬಗ್ಗೆ ವದಂತಿ

0
16

ವಿಶ್ವದ ಪ್ರಮುಖ ತಂತ್ರಜ್ಞಾನ ಕಂಪನಿಗಳಲ್ಲಿ ಒಂದಾಗಿರುವ ಆಪಲ್ ಸೆಪ್ಟೆಂಬರ್ 9, 2026ರಂದು ತನ್ನ ವಾರ್ಷಿಕ ಉತ್ಪನ್ನ ಬಿಡುಗಡೆ ಕಾರ್ಯಕ್ರಮ ಆಯೋಜಿಸಲು ಸಿದ್ಧವಾಗಿದೆ. ಕ್ಯುಪರ್ಟಿನೊದಲ್ಲಿರುವ ಆಪಲ್ ಪಾರ್ಕ್‌ನ ಸ್ಟೀವ್ ಜಾಬ್ಸ್ ಥಿಯೇಟರ್‌ನಲ್ಲಿ ನಡೆಯಲಿರುವ ಕಾರ್ಯಕ್ರಮವು ಅಮೆರಿಕದ ಸಮಯದಂತೆ ಬೆಳಗ್ಗೆ 10 ಗಂಟೆಗೆ ಆರಂಭವಾಗಲಿದ್ದು, ಭಾರತೀಯ ಸಮಯದ ಪ್ರಕಾರ ರಾತ್ರಿ 10.30ಕ್ಕೆ ವೀಕ್ಷಿಸಬಹುದಾಗಿದೆ.

ಆಪಲ್‌ನ ಅಧಿಕೃತ ವೆಬ್‌ಸೈಟ್ ಸೇರಿದಂತೆ ವಿವಿಧ ಡಿಜಿಟಲ್ ವೇದಿಕೆಗಳಲ್ಲಿ ಕಾರ್ಯಕ್ರಮದ ನೇರಪ್ರಸಾರ ಲಭ್ಯವಾಗಲಿದೆ. ಈ ಬಾರಿ ಕಂಪನಿ “ಸರ್ಪ್ರೈಸ್ ಅಂಡ್ ಶೈನ್” ಎಂಬ ಟ್ಯಾಗ್‌ಲೈನ್‌ನೊಂದಿಗೆ ಈವೆಂಟ್ ನಡೆಸುತ್ತಿದೆ.

ಐಫೋನ್ 18 ಪ್ರೊ ಸರಣಿಗೆ ಭರ್ಜರಿ ಅಪ್‌ಗ್ರೇಡ್?

ಈ ಕಾರ್ಯಕ್ರಮದಲ್ಲಿ ಐಫೋನ್ 18 ಪ್ರೊ ಮತ್ತು ಐಫೋನ್ 18 ಪ್ರೊ ಮ್ಯಾಕ್ಸ್ ಪರಿಚಯಿಸುವ ಸಾಧ್ಯತೆ ಇದೆ. ವರದಿಗಳ ಪ್ರಕಾರ, ಎರಡೂ ಪ್ರೀಮಿಯಂ ಮಾದರಿಗಳಲ್ಲಿ ಹಲವು ಹೊಸ ತಂತ್ರಜ್ಞಾನಗಳನ್ನು ಅಳವಡಿಸಲು ಆಪಲ್ ಮುಂದಾಗಿದೆ.

ಸುಧಾರಿತ 2nm ತಂತ್ರಜ್ಞಾನದಲ್ಲಿ ತಯಾರಿಸಲಾದ A20 ಪ್ರೊ ಚಿಪ್‌ಸೆಟ್, ಆಪಲ್‌ನ ಹೊಸ C2 ಮೋಡೆಮ್ ಸೇರಿದಂತೆ ಹಲವು ಅಪ್‌ಗ್ರೇಡ್‌ಗಳು ಬರಬಹುದು ಎನ್ನಲಾಗಿದೆ. ಸ್ಕ್ರೀನ್‌ನ ಕೆಳಭಾಗದಲ್ಲಿ ಫೇಸ್ ಐಡಿ ತಂತ್ರಜ್ಞಾನ ಅಳವಡಿಸುವ ಸಾಧ್ಯತೆಯ ಬಗ್ಗೆಯೂ ವದಂತಿಗಳಿವೆ.

ಕ್ಯಾಮೆರಾ ವಿನ್ಯಾಸದಲ್ಲೂ ಬದಲಾವಣೆ ನಿರೀಕ್ಷಿಸಲಾಗಿದ್ದು, ದೊಡ್ಡದಾದ ಕ್ಯಾಮೆರಾ ಬಂಪ್ ಕಾಣಿಸಿಕೊಳ್ಳಬಹುದು. ಡಾರ್ಕ್ ಚೆರ್ರಿ ಎಂಬ ಹೊಸ ಬಣ್ಣದ ಆಯ್ಕೆಯನ್ನೂ ಪರಿಚಯಿಸುವ ಸಾಧ್ಯತೆಯಿದೆ. ಐಫೋನ್ 18 ಪ್ರೊ ಮ್ಯಾಕ್ಸ್‌ನಲ್ಲಿ ಉತ್ತಮ ಛಾಯಾಗ್ರಹಣಕ್ಕಾಗಿ ವೇರಿಯಬಲ್ ಅಪರ್ಚರ್ ಕ್ಯಾಮೆರಾ ನೀಡಬಹುದು ಎಂಬ ವರದಿಗಳಿವೆ.

ಮೊದಲ ಫೋಲ್ಡಬಲ್ ಐಫೋನ್‌ಗಾಗಿ ಕುತೂಹಲ

ಈ ಬಾರಿಯ ಆಪಲ್ ಈವೆಂಟ್‌ನ ಪ್ರಮುಖ ಆಕರ್ಷಣೆ ಕಂಪನಿಯ ಮೊದಲ ಮಡಿಸಬಹುದಾದ ಐಫೋನ್ ಆಗಿರಬಹುದೆಂಬ ನಿರೀಕ್ಷೆ ಇದೆ. ಹಲವು ವರ್ಷಗಳಿಂದ ಫೋಲ್ಡಬಲ್ ಐಫೋನ್ ಅಭಿವೃದ್ಧಿಪಡಿಸುತ್ತಿದೆ ಎಂಬ ವರದಿಗಳು ಕೇಳಿಬರುತ್ತಿದ್ದು, ಇದಕ್ಕೆ ಐಫೋನ್ ಫೋಲ್ಡ್ ಅಥವಾ ಐಫೋನ್ ಅಲ್ಟ್ರಾ ಎಂಬ ಹೆಸರು ಇರಬಹುದು ಎಂಬ ಚರ್ಚೆ ನಡೆಯುತ್ತಿದೆ.

ವರದಿಗಳ ಪ್ರಕಾರ, ಫೋನ್ ತೆರೆದಾಗ ಸುಮಾರು 7.8 ಇಂಚಿನ ಒಳಗಿನ ಡಿಸ್ಪ್ಲೇ ಹಾಗೂ ಹೊರಭಾಗದಲ್ಲಿ ಸುಮಾರು 5.3 ಇಂಚಿನ ಕವರ್ ಸ್ಕ್ರೀನ್ ಹೊಂದಿರಬಹುದು. ಇದು ನಿಜವಾದರೆ, ಆಪಲ್‌ನ ಐಫೋನ್ ಸರಣಿಯಲ್ಲಿ ಮಹತ್ವದ ವಿನ್ಯಾಸ ಬದಲಾವಣೆಯಾಗಲಿದೆ.

ಆಪಲ್ ವಾಚ್, ಏರ್‌ಪಾಡ್ಸ್‌ಗೂ ಹೊಸ ರೂಪ

ಐಫೋನ್‌ಗಳ ಜತೆಗೆ ಆಪಲ್ ವಾಚ್ ಸರಣಿ 12, ಹೊಸ ಏರ್‌ಪಾಡ್ಸ್ ಹಾಗೂ ಇತರ ಪರಿಕರಗಳನ್ನೂ ಕಂಪನಿ ಪರಿಚಯಿಸುವ ಸಾಧ್ಯತೆಯಿದೆ. ಹೀಗಾಗಿ ಸೆಪ್ಟೆಂಬರ್ 9ರ ಕಾರ್ಯಕ್ರಮದ ಮೇಲೆ ಆಪಲ್ ಅಭಿಮಾನಿಗಳು ಹಾಗೂ ತಂತ್ರಜ್ಞಾನ ಪ್ರಿಯರ ಗಮನ ನೆಟ್ಟಿದೆ.

ಬೇಸಿಕ್ ಐಫೋನ್ 18ಕ್ಕೆ ಕಾಯಬೇಕಾಗಬಹುದು

ಈ ಬಾರಿ ಆಪಲ್ ತನ್ನ ಐಫೋನ್ ಬಿಡುಗಡೆ ತಂತ್ರದಲ್ಲಿ ಬದಲಾವಣೆ ಮಾಡಲಿದೆ ಎಂಬ ವರದಿಗಳಿವೆ. ಸಾಮಾನ್ಯ ಐಫೋನ್ 18 ಅನ್ನು ಸೆಪ್ಟೆಂಬರ್ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡದೆ, 2027ರಲ್ಲಿ ಪರಿಚಯಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಆದರೆ ಐಫೋನ್ 18 ಸರಣಿ, ಫೋಲ್ಡಬಲ್ ಐಫೋನ್ ಸೇರಿದಂತೆ ಹೊಸ ಉತ್ಪನ್ನಗಳ ಕುರಿತ ಬಹುತೇಕ ಮಾಹಿತಿಗಳು ಸದ್ಯಕ್ಕೆ ವರದಿಗಳು ಮತ್ತು ವದಂತಿಗಳನ್ನೇ ಆಧರಿಸಿವೆ. ಆಪಲ್ ಅಧಿಕೃತವಾಗಿ ಘೋಷಿಸಿದ ಬಳಿಕವಷ್ಟೇ ನಿಖರ ಮಾಹಿತಿ ಸ್ಪಷ್ಟವಾಗಲಿದೆ.