ಬೆಳ್ತಂಗಡಿ : ಜೆಸಿಬಿ ಮೂಲಕ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅಕ್ರಮವಾಗಿ ಪ್ರವೇಶಿಸಿ ಬೆದರಿಸಿ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ 75 ವರ್ಷದ ವೃದ್ಧೆಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಏಳು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ತೆಕ್ಕಾರು ಗ್ರಾಮದ ಬಾಜಾರು ಮನೆಯ ಸಾಬ ಬ್ಯಾರಿ ಅವರ ಪತ್ನಿ ಬೀಪಾತುಮ್ಮ (75) ದೂರು ನೀಡಿದವರು. ಅವರು ತಮ್ಮ ಮಗ ಅಬ್ದುಲ್ ನಜೀರ್ ಅವರೊಂದಿಗೆ ಬಾಜಾರು ಪ್ರದೇಶದಲ್ಲಿ ವಾಸವಾಗಿದ್ದಾರೆ.
ದೂರಿನ ಪ್ರಕಾರ, ಆ.25ರಂದು ಮಧ್ಯಾಹ್ನ ಸುಮಾರು 3.30ರ ವೇಳೆಗೆ ಸರ್ವೆ ನಂಬ್ರ 141/3ಪಿ1 ಮತ್ತು 64/1ಪಿ1ರ ಜಮೀನಿನಲ್ಲಿ ಜೆಸಿಬಿ ಮೂಲಕ ಕೆಲಸ ಮಾಡಲಾಗುತ್ತಿತ್ತು. ಈ ಸಂದರ್ಭದಲ್ಲಿ ನೆರೆ ಜಮೀನಿನ ಮಾಲೀಕರಾದ ಮಹಮ್ಮದ್ ಅವರ ಮಕ್ಕಳಾದ ಅಬೂಬಕ್ಕರ್, ತೌಸಿಫ್, ಸತ್ತಾರ್, ಸುಲೈಮಾನ್ ಹಾಗೂ ಅವರ ಸಂಬಂಧಿಕರಾದ ಹಾರಿಸ್, ಅಬ್ದುಲ್ ರಝಾಕ್, ಫರ್ದಾನ್ ಮತ್ತು ಮಹಮ್ಮದ್ ಅವರ ಮಗಳ ಗಂಡ ಸೇರಿದಂತೆ ಆರೋಪಿಗಳು ಅಕ್ರಮ ಕೂಟ ಸೇರಿಕೊಂಡು ಜಮೀನಿಗೆ ಪ್ರವೇಶಿಸಿದ್ದಾರೆ ಎಂದು ಆರೋಪಿಸಲಾಗಿದೆ.
‘ಈ ಜಾಗದಲ್ಲಿ ಕೆಲಸ ಮಾಡಬಾರದು, ಈ ಜಾಗ ನಮ್ಮದು’ ಎಂದು ಹೇಳಿ ಬೆದರಿಕೆ ಹಾಕಿದ್ದಲ್ಲದೆ, ಕೆಲಸ ಮುಂದುವರಿಸಿದರೆ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ವೇಳೆ ಬೀಪಾತುಮ್ಮ ಅವರ ಮಕ್ಕಳಿಗೆ ಕೈಯಿಂದ ಹೊಡೆದು ಹಲ್ಲೆ ನಡೆಸಲಾಗುತ್ತಿತ್ತು. ಅದನ್ನು ತಡೆಯಲು ಮುಂದಾದ ಬೀಪಾತುಮ್ಮ ಅವರ ಮೇಲೆಯೂ ಆರೋಪಿಗಳು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಕೈಯಿಂದ ಹೊಡೆದು, ಕಾಲಿನಿಂದ ತುಳಿದಿದ್ದಾರೆ ಎನ್ನಲಾಗಿದ್ದು, ಸುಲೈಮಾನ್ ಎಂಬಾತ ಕೈಯಲ್ಲಿದ್ದ ಕೊಡೆಯಿಂದ ಹೊಡೆದಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹಲ್ಲೆಯ ವೇಳೆ ಬೀಪಾತುಮ್ಮ ಅವರು ಹೊಂಡಕ್ಕೆ ಬಿದ್ದಿದ್ದು, ಪರಿಣಾಮ ಬೆನ್ನು, ಸೊಂಟ ಹಾಗೂ ಕೈ-ಕಾಲುಗಳಿಗೆ ನೋವುಂಟಾಗಿದೆ ಎಂದು ತಿಳಿಸಿದ್ದಾರೆ. ಗಾಯಗೊಂಡ ಅವರು ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದೂರು ಸ್ವೀಕರಿಸಿದ ಉಪ್ಪಿನಂಗಡಿ ಠಾಣಾಧಿಕಾರಿ ಗಜೇಂದ್ರ ನಾಯ್ಕ ಅವರು ಆ.26ರಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಬೂಬಕ್ಕರ್, ತೌಸಿಫ್, ಸತ್ತಾರ್, ಸುಲೈಮಾನ್, ಹಾರಿಸ್, ಅಬ್ದುಲ್ ರಝಾಕ್ ಮತ್ತು ಫರ್ದಾನ್ ವಿರುದ್ಧ ಅಪರಾಧ ಕ್ರಮಾಂಕ 111/2026ರಂತೆ ಭಾರತೀಯ ನ್ಯಾಯ ಸಂಹಿತೆಯ (BNS) ಕಲಂ 115(2), 118(1), 351 ಮತ್ತು 190ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಜಮೀನು ವಿವಾದದ ಹಿನ್ನೆಲೆಯಲ್ಲಿ ಘಟನೆ ನಡೆದಿರುವುದಾಗಿ ತಿಳಿದುಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

