ಪ್ರವಾಸಿಗರ ಟಿಟಿ ಮೇಲೆ ಉರುಳಿದ ಲಾರಿ

0
10

ಮೂವರಿಗೆ ಗಂಭೀರ ಗಾಯ

ಸುಳ್ಯ : ಅರಂತೋಡಿನ ದೇವರಕೊಲ್ಲಿ ಬಳಿ ಬುಧವಾರ ಸಂಜೆ ಲಾರಿಯೊಂದು ನಿಯಂತ್ರಣ ತಪ್ಪಿ ರಸ್ತೆಬದಿಯಲ್ಲಿ ನಿಂತಿದ್ದ ಟೆಂಪೋ ಟ್ರಾವೆಲರ್‌ (ಟಿಟಿ) ವಾಹನದ ಮೇಲೆ ಉರುಳಿಬಿದ್ದ ಪರಿಣಾಮ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ಗುಜರಾತ್‌ನ ಅಹಮದಾಬಾದ್‌ನಿಂದ ಪ್ರವಾಸಕ್ಕೆ ಬಂದಿದ್ದ ಪ್ರವಾಸಿಗರ ತಂಡವೊಂದು ಮಡಿಕೇರಿಯಿಂದ ಮಂಗಳೂರು ಕಡೆಗೆ ಪ್ರಯಾಣಿಸುತ್ತಿತ್ತು. ದೇವರಕೊಲ್ಲಿ ಅಬ್ಬಿ ಜಲಪಾತದ ಸಮೀಪ ರಸ್ತೆಬದಿಯಲ್ಲಿ ತಮ್ಮ ಟಿಟಿ ವಾಹನವನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದರು. ಈ ವೇಳೆ ಸುಳ್ಯ ಕಡೆಯಿಂದ ಅದೇ ಮಾರ್ಗದಲ್ಲಿ ಸಾಗುತ್ತಿದ್ದ ಲಾರಿಯೊಂದು ಏಕಾಏಕಿ ನಿಯಂತ್ರಣ ತಪ್ಪಿ ನಿಂತಿದ್ದ ಟಿಟಿ ವಾಹನದ ಮೇಲೆ ಉರುಳಿಬಿದ್ದಿದೆ.

ಅಪಘಾತದ ಸಂದರ್ಭ ಟಿಟಿ ವಾಹನದಲ್ಲಿ ಒಟ್ಟು ಏಳು ಪ್ರವಾಸಿಗರಿದ್ದರು. ಇವರ ಪೈಕಿ ಓರ್ವ ಪ್ರಯಾಣಿಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಲಾರಿ ಚಾಲಕ ಮತ್ತು ಕ್ಲೀನರ್‌ ಕೂಡ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ. ಒಟ್ಟು ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯರು ಹಾಗೂ ಇತರ ವಾಹನ ಸವಾರರು ಕೂಡಲೇ ನೆರವಿಗೆ ಧಾವಿಸಿದ್ದಾರೆ.

ಗಾಯಾಳುಗಳನ್ನು ತಕ್ಷಣ ಆಂಬ್ಯುಲೆನ್ಸ್‌ಗಳ ಮೂಲಕ ಸುಳ್ಯದ ಖಾಸಗಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗಿದೆ. ಅಪಘಾತದ ತೀವ್ರತೆಯಿಂದ ಟಿಟಿ ವಾಹನಕ್ಕೂ ಹಾನಿಯಾಗಿದ್ದು, ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಅಪಘಾತದ ಬಳಿಕ ಲಾರಿ ರಸ್ತೆಯಲ್ಲಿ ಉರುಳಿಬಿದ್ದಿದ್ದರಿಂದ ವಾಹನ ಸಂಚಾರಕ್ಕೂ ಅಡ್ಡಿಯುಂಟಾಯಿತು. ಬಳಿಕ ಕ್ರೇನ್‌ ಸಹಾಯದಿಂದ ಉರುಳಿಬಿದ್ದ ಲಾರಿಯನ್ನು ಮೇಲಕ್ಕೆತ್ತಿ ರಸ್ತೆ ತೆರವುಗೊಳಿಸಲಾಯಿತು. ಇದರಿಂದ ಹೆದ್ದಾರಿಯಲ್ಲಿ ವಾಹನ ಸಂಚಾರ ಮತ್ತೆ ಸಹಜ ಸ್ಥಿತಿಗೆ ಮರಳಿತು.

ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿಸಿದ್ದಾರೆ.