
ಉಜಿರೆ : 2006ರಲ್ಲಿ ಉಜಿರೆಯ ಎಸ್‌ಡಿಎಂ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಶಿಕ್ಷಣ ಪೂರ್ಣಗೊಳಿಸಿದ ಹತ್ತನೇ ತರಗತಿ ‘ಸಿ’ ವಿಭಾಗದ ವಿದ್ಯಾರ್ಥಿಗಳು 20 ವರ್ಷಗಳ ಬಳಿಕ ಒಂದೆಡೆ ಸೇರಿ ‘ಸ್ನೇಹ ಸಮ್ಮಿಲನ–ಗುರುನಮನ’ ಕಾರ್ಯಕ್ರಮವನ್ನು ಸಂಭ್ರಮದಿಂದ ಆಯೋಜಿಸಿದರು.
53 ಮಂದಿ ಸಹಪಾಠಿಗಳು ಸಂಘಟಿತರಾಗಿ ಅಂದಿನ ತಮ್ಮ ಶಿಕ್ಷಕರನ್ನು ವೈಯಕ್ತಿಕವಾಗಿ ಆಹ್ವಾನಿಸಿ, ಗೌರವಪೂರ್ವಕವಾಗಿ ಸನ್ಮಾನಿಸುವ ಮೂಲಕ ತಮ್ಮ ಶಾಲಾ ದಿನಗಳ ನೆನಪುಗಳನ್ನು ಮೆಲುಕು ಹಾಕಿದರು. ಹಿರಿಯ ವಿದ್ಯಾರ್ಥಿ ಹಾಗೂ ಮಡಂತ್ಯಾರ್ ಸೇಕ್ರೆಡ್ ಹಾರ್ಟ್ ಕಾಲೇಜಿನ ಉಪನ್ಯಾಸಕರಾದ ನೆಲ್ಸನ್ ಮೋನಿಸ್ ಅವರ ನೇತೃತ್ವದಲ್ಲಿ ಶಿವಪ್ರಸಾದ್ ಸೂರ್ಯ, ಪ್ರಸಾದ್, ಜಲೀಲ್, ಸಹನಾ ಸೇರಿದಂತೆ ಹಲವು ಮಂದಿ ಕಾರ್ಯಕ್ರಮದ ಸಿದ್ಧತೆಯಲ್ಲಿ ಪ್ರಮುಖ ಪಾತ್ರ ವಹಿಸಿದರು.
ಕಾರ್ಯಕ್ರಮದ ಅಂಗವಾಗಿ ಶಾಲೆಯ ಪ್ರವೇಶದ್ವಾರದಲ್ಲಿ ಶಿಕ್ಷಕರಿಗೆ ಆರತಿ ಬೆಳಗಿ, ಗುಲಾಬಿ ಹೂ ನೀಡಿ ಹಾಗೂ ಪಾದಮುಟ್ಟಿ ನಮಸ್ಕರಿಸುವ ಮೂಲಕ ಗೌರವ ಸಲ್ಲಿಸಲಾಯಿತು. ಬಳಿಕ ಚೆಂಡೆ-ಮೇಳದ ಭವ್ಯ ಮೆರವಣಿಗೆಯೊಂದಿಗೆ ಶಿಕ್ಷಕರನ್ನು ಸಭಾಭವನಕ್ಕೆ ಕರೆತರಲಾಯಿತು.
ಅಂದಿನ ತರಗತಿ ಅಧ್ಯಾಪಕರಾಗಿದ್ದ ನಿವೃತ್ತ ಮುಖ್ಯಶಿಕ್ಷಕ ಸುರೇಶ್ ಕೆ. ಅವರು ಹಳೆಯ ಹಾಜರಿ ಪುಸ್ತಕವನ್ನು ತಂದು ವಿದ್ಯಾರ್ಥಿಗಳ ಹಾಜರಿ ಕರೆದದ್ದು ವಿಶೇಷವಾಗಿತ್ತು. 20 ವರ್ಷಗಳ ಹಿಂದಿನ ನೆನಪುಗಳು ಮರುಕಳಿಸಿದ ಸಂದರ್ಭದಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪರಸ್ಪರ ಯೋಗಕ್ಷೇಮ ವಿಚಾರಿಸಿಕೊಂಡು ಆತ್ಮೀಯವಾಗಿ ಮಾತನಾಡಿದರು.
ಸಮಾರಂಭದಲ್ಲಿ 18 ಮಂದಿ ಶಿಕ್ಷಕರು ಹಾಗೂ ಐದು ಮಂದಿ ಬೋಧಕೇತರ ಸಿಬ್ಬಂದಿಯನ್ನು ಶಾಲು, ಸ್ಮರಣಿಕೆ, ಹಾರ, ಹಣ್ಣು-ಹಂಪಲು, ಪೆನ್ನು ಹಾಗೂ ಕೀ ಚೈನ್ ನೀಡಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಶಿಕ್ಷಕರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು, ಹಳೆಯ ವಿದ್ಯಾರ್ಥಿಗಳ ಈ ಅಪೂರ್ವ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮಕ್ಕೆ ನಿವೃತ್ತ ಮುಖ್ಯೋಪಾಧ್ಯಾಯ ಸುರೇಶ್ ಕೆ. ಚಾಲನೆ ನೀಡಿದರು. ಶಿವಪ್ರಸಾದ್ ಸೂರ್ಯ ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ವಿದ್ಯಾಕಿರಣ್ ಶುಭಾಶಂಸನೆ ಮಾಡಿದರು. ಸ್ವಾತಿ ಧನ್ಯವಾದವಿತ್ತರು. ನೆಲ್ಸನ್ ಮೋನಿಸ್ ಕಾರ್ಯಕ್ರಮ ನಿರ್ವಹಿಸಿದರು.
ಬೆಳಗ್ಗೆ ಭರ್ಜರಿ ಉಪಾಹಾರ, ಮಧ್ಯಾಹ್ನ ಭೂರಿ ಭೋಜನ ಹಾಗೂ ವಿವಿಧ ಮನೋರಂಜನಾ ಕಾರ್ಯಕ್ರಮಗಳು ನಡೆದವು. “ಹಿರಿಯ ವಿದ್ಯಾರ್ಥಿಗಳೇ ಗುರುಗಳಾದರು, ಗುರುಗಳೇ ವಿದ್ಯಾರ್ಥಿಗಳಾದರು” ಎಂಬ ರೀತಿಯಲ್ಲಿ ನಡೆದ ಈ ಸ್ನೇಹ ಸಮ್ಮಿಲನವು ಎಲ್ಲರ ಗಮನ ಸೆಳೆಯಿತು.
ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಸಂಯೋಜಕ ಪ್ರೊ. ಎಸ್.ಎನ್. ಕಾಕತ್ಕರ್ ಅವರು ಕಾರ್ಯಕ್ರಮದ ಅಚ್ಚುಕಟ್ಟಾದ ಆಯೋಜನೆ ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಕೆಲವೇ ನಿಮಿಷಗಳ ಕಾಲ ಕಾರ್ಯಕ್ರಮ ವೀಕ್ಷಿಸಲು ಬಂದಿದ್ದ ಅವರು ಇಡೀ ಸಮಾರಂಭದಲ್ಲಿ ಕೊನೆಯವರೆಗೂ ಉಪಸ್ಥಿತರಿದ್ದು, ಹಿರಿಯ ವಿದ್ಯಾರ್ಥಿಗಳ ಶಿಸ್ತು, ಸಮಯಪಾಲನೆ ಹಾಗೂ ಕಾರ್ಯಕ್ರಮ ನಿರ್ವಹಣೆಯನ್ನು ಪ್ರಶಂಸಿಸಿದರು.
“ರಾಜ್ಯಮಟ್ಟದ ಕಾರ್ಯಕ್ರಮಕ್ಕೂ ಮಿಗಿಲಾಗಿ ಆಕರ್ಷಕವಾಗಿ ವೇದಿಕೆ ಸಿಂಗರಿಸಲಾಗಿದೆ. ಶಿಸ್ತು, ಸಮಯಪಾಲನೆ ಹಾಗೂ ಅಚ್ಚುಕಟ್ಟಾದ ನಿರ್ವಹಣೆ ಗಮನ ಸೆಳೆಯಿತು. ಐದು ನಿಮಿಷ ನೋಡಿ ತೆರಳಲು ಬಂದ ನನ್ನನ್ನು ಇಡೀ ಕಾರ್ಯಕ್ರಮ ವೀಕ್ಷಿಸುವಂತೆ ಮಾಡಿದೆ” ಎಂದು ಪ್ರೊ. ಕಾಕತ್ಕರ್ ಅಭಿನಂದಿಸಿದರು.
ಕಾರ್ಯಕ್ರಮದ ರೂವಾರಿ ನೆಲ್ಸನ್ ಮೋನಿಸ್ ಮಾತನಾಡಿ, “ನಮ್ಮ ಶ್ರಮ ಮತ್ತು ಪರಿಶ್ರಮಕ್ಕೆ ಸಂದ ಗೌರವ ಇದಾಗಿದೆ. 20 ವರ್ಷಗಳ ಬಳಿಕ ಗುರುಗಳನ್ನು ಒಂದೆಡೆ ಸೇರಿಸಿ ಗೌರವಿಸುವ ಅವಕಾಶ ದೊರೆತಿರುವುದು ಸಂತಸದ ವಿಚಾರ” ಎಂದು ಹರ್ಷ ವ್ಯಕ್ತಪಡಿಸಿದರು.
ಹಳೆಯ ಸಹಪಾಠಿಗಳು ಪರಸ್ಪರ ಆತ್ಮೀಯವಾಗಿ ಬೆರೆತು ಶಾಲಾ ದಿನಗಳ ನೆನಪುಗಳನ್ನು ಹಂಚಿಕೊಂಡು ಸಂಭ್ರಮಿಸಿದರು. “ಅಯ್ಯಯ್ಯ ಎಂಚ ಪೊರ್ಲಾಂಡ್” ಎಂದು ಎಲ್ಲರೂ ಅಚ್ಚರಿ ಹಾಗೂ ಸಂತಸ ವ್ಯಕ್ತಪಡಿಸುವ ಮೂಲಕ ಕಾರ್ಯಕ್ರಮದ ಯಶಸ್ಸನ್ನು ಸಂಭ್ರಮಿಸಿದರು.

