14 ವರ್ಷದ ಶಾಲಾ ಬಾಲಕ ಆತ್ಮಹತ್ಯೆಗೆ ಶರಣು

0
96

ಬೆಳ್ತಂಗಡಿ : ತಾಲೂಕಿನ ಬಂದಾರು ಗ್ರಾಮದ ಬೈಪಾಡಿ ಕುರಿಯಾಳದಲ್ಲಿ 14 ವರ್ಷದ ಶಾಲಾ ಬಾಲಕನೊಬ್ಬ ಮನೆಯಲ್ಲಿ ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ನಡೆದಿದೆ.

ಮೃತ ಬಾಲಕನನ್ನು ಬೈಪಾಡಿ ಕುರಿಯಾಳ ನಿವಾಸಿ ಭರತ್ ಗೌಡ ಅವರ ಪುತ್ರ ಶ್ರವಣ್ ಬಿ.ಕೆ. (14) ಎಂದು ಗುರುತಿಸಲಾಗಿದೆ. ಶ್ರವಣ್ ಬೆಳ್ತಂಗಡಿಯ ಖಾಸಗಿ ಪ್ರೌಢಶಾಲೆಯೊಂದರಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು.

ಮೂಲಗಳ ಪ್ರಕಾರ, ಶ್ರವಣ್ ಇತ್ತೀಚೆಗಷ್ಟೇ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದನು. ಆದರೆ ಹುಟ್ಟುಹಬ್ಬದ ಸಂಭ್ರಮದ ಬೆನ್ನಲ್ಲೇ ಬಾಲಕ ದುರಂತ ಅಂತ್ಯ ಕಂಡಿರುವುದು ಕುಟುಂಬಸ್ಥರು ಹಾಗೂ ಸ್ಥಳೀಯರನ್ನು ತೀವ್ರವಾಗಿ ದುಃಖಕ್ಕೀಡು ಮಾಡಿದೆ.

ಬಾಲಕ ತಂದೆ, ತಾಯಿ ಹಾಗೂ ಓರ್ವ ಸಹೋದರಿಯನ್ನು ಅಗಲಿದ್ದಾನೆ. ಕುಟುಂಬದಲ್ಲಿ ಮಗನನ್ನು ಕಳೆದುಕೊಂಡ ನೋವು ಮಡುಗಟ್ಟಿದ್ದು, ಸಂಬಂಧಿಕರು ಹಾಗೂ ಸ್ಥಳೀಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.