ಮೊಬೈಲ್ ವಿಚಾರಕ್ಕೆ ಮಾತಿನ ಚಕಮಕಿ : ಕೊನೆಗೆ ಚಾಕುವಿನಿಂದ ಇರಿತ

0
100

ಮಂಗಳೂರು : ಮೊಬೈಲ್ ವಿಚಾರವಾಗಿ ಅಣ್ಣ-ತಮ್ಮಂದಿರ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿ, ತಮ್ಮ ಚಾಕುವಿನಿಂದ ಇರಿದು ಅಣ್ಣನನ್ನು ಕೊಲೆ ಮಾಡಿರುವ ಘಟನೆ ನಗರದ ಬಿಜೈ ಕೊಟ್ಟಾರ ಕ್ರಾಸ್ ಬಳಿ ಭಾನುವಾರ ರಾತ್ರಿ ನಡೆದಿದೆ.

ಮೃತರನ್ನು ಅಡಿವೆಪ್ಪ (40) ಎಂದು ಗುರುತಿಸಲಾಗಿದ್ದು, ಅವರ ತಮ್ಮ ರಾಜು (36) ಕೊಲೆ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಮೂಲತಃ ಬೆಳಗಾವಿ ಜಿಲ್ಲೆಯ ಬೈಲಹೊಂಗಲದವರಾದ ಅಣ್ಣ-ತಮ್ಮಂದಿರು ತಮ್ಮ ತಾಯಿಯೊಂದಿಗೆ ಕೊಟ್ಟಾರ ಕ್ರಾಸ್‌ನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಅಡಿವೆಪ್ಪ ಮತ್ತು ರಾಜು ಇಬ್ಬರೂ ಕೂಲಿ ಕೆಲಸ ಮಾಡಿಕೊಂಡಿದ್ದು, ಅವರ ತಾಯಿ ಸಮೀಪದಲ್ಲೇ ಸಣ್ಣ ಗೂಡಂಗಡಿ ನಡೆಸುತ್ತಿದ್ದರು.

ಮೊಬೈಲ್ ವಿಚಾರಕ್ಕೆ ಆರಂಭವಾದ ಜಗಳ

ಭಾನುವಾರ ರಾತ್ರಿ ಸುಮಾರು 10.30ರಿಂದ 11 ಗಂಟೆಯ ವೇಳೆಗೆ ಮೊಬೈಲ್ ವಿಚಾರವಾಗಿ ಅಣ್ಣ-ತಮ್ಮಂದಿರ ನಡುವೆ ಮಾತಿನ ಚಕಮಕಿ ಆರಂಭವಾಗಿದೆ. ಬಳಿಕ ಜಗಳ ತೀವ್ರಗೊಂಡು ಇಬ್ಬರ ನಡುವೆ ಹೊಡೆದಾಟ ನಡೆದಿದೆ ಎನ್ನಲಾಗಿದೆ.

ಈ ವೇಳೆ ರಾಜು ಚಾಕುವಿನಿಂದ ಅಡಿವೆಪ್ಪ ಅವರಿಗೆ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಅಡಿವೆಪ್ಪ ರಕ್ತದ ಮಡುವಿನಲ್ಲಿ ಬಿದ್ದಿದ್ದರು.

ಮನೆಗೆ ಬಂದ ತಾಯಿಗೆ ಕಂಡಿದ್ದು ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಗ

ಘಟನೆ ನಡೆದ ಸಂದರ್ಭದಲ್ಲಿ ತಾಯಿ ಅಂಗಡಿಯಲ್ಲಿ ಇದ್ದರೆನ್ನಲಾಗಿದೆ. ಅಂಗಡಿ ಮುಚ್ಚಿ ಮನೆಗೆ ವಾಪಸ್ ಬಂದಾಗ ಅಡಿವೆಪ್ಪ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ನಡೆಸಲಾಯಿತು.

ತಕ್ಷಣವೇ ಅಡಿವೆಪ್ಪ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ವೈದ್ಯರು ಪರೀಕ್ಷಿಸಿದಾಗ ಅವರು ಮೃತಪಟ್ಟಿರುವುದು ತಿಳಿದುಬಂದಿದೆ.

ಉರ್ವ ಠಾಣೆ ಪೊಲೀಸರಿಂದ ತನಿಖೆ

ಮಾಹಿತಿ ತಿಳಿಯುತ್ತಿದ್ದಂತೆ ಉರ್ವ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆಗೆ ಸಂಬಂಧಿಸಿದಂತೆ ಆರೋಪಿ ರಾಜು ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಅಣ್ಣ-ತಮ್ಮಂದಿರ ನಡುವೆ ಜಗಳಕ್ಕೆ ಕಾರಣವಾದ ಮೊಬೈಲ್ ವಿಚಾರ ಹಾಗೂ ಘಟನೆಗೆ ಸಂಬಂಧಿಸಿದ ಇತರ ಅಂಶಗಳ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಇಬ್ಬರಿಗೂ ಮದ್ಯಪಾನದ ಚಟವಿತ್ತು ಎನ್ನಲಾಗಿದ್ದು, ಘಟನೆ ನಡೆದ ಸಂದರ್ಭದಲ್ಲಿ ಅವರ ಸ್ಥಿತಿಯ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.