ಅಪಸ್ಮಾರ ಶಾಪವಲ್ಲ, ಒಂದು ಗುಣಪಡಿಸಲಾಗುವ ಖಾಯಿಲೆ : ಡಾ| ನಿಹಾಲ್ ಅಹಮದ್

0
27

ಮಂಗಳೂರು : ಅಪಸ್ಮಾರ (ಮೂರ್ಛ ರೋಗ) ರೋಗವು ಮೆದುಳಿನಲ್ಲಿನ ನರಕೋಶಗಳಿಗೆ ಉಂಟಾಗುವ ಹಾನಿ, ಅಸಮತೋಲನ, ನರಗಳ ದೌರ್ಬಲ್ಯದಿಂದ ಬರುವ ಖಾಯಿಲೆ. ದೇಶದಲ್ಲಿ ಸುಮಾರು 12 ಮಿಲಿಯನ್ ಜನರು ಈ ರೋಗ ಪೀಡಿತರಾಗಿದ್ದಾರೆ. ಪ್ರಾಥಮಿಕ ಹಂತದಲ್ಲಿ ನುರಿತ ವೈದ್ಯರ ಸಲಹೆ ಮತ್ತು ಚಿಕಿತ್ಸೆಯಿಂದ ಸಂಪೂರ್ಣ ಗುಣಮುಖರಾಗಬಹುದು ಎಂದು ಬೆಂಗಳೂರು ನಗರ ಮೂಲಕ ಸ್ಪರ್ಶ ಆಸ್ಪತ್ರೆಯ ಹಿರಿಯ ನರರೋಗ ಶಸ್ತ್ರಚಿಕಿತ್ಸಕರಾದ ಡಾ| ನಿಹಾಲ್ ಅಹಮದ್ ಮಾಹಿತಿ ನೀಡಿದ್ದಾರೆ. ಅವರು ಭಾರತೀಯ ವೈದ್ಯಕೀಯ ಸಂಸ್ಥೆ, ಮಂಗಳೂರು ಶಾಖೆ, ಬೆಂಗಳೂರು ನಗರ ಮೂಲದ ಸ್ಪರ್ಶ ಆಸ್ಪತ್ರೆಯ ಸಹಯೋಗದಲ್ಲಿ ತಾ. 29.08.2026ರಂದು ನಗರದ ಹೋಟೆಲ್ ಓಷಿಯನ್ ಪರ್ಲ್ ಸಭಾಂಗಣದಲ್ಲಿ ಜರಗಿದ ವೈದ್ಯಕೀಯ ಕಾರ್ಯಾಗಾರದಲ್ಲಿ ಅತಿಥಿ ಉಪನ್ಯಾಸ ನೀಡಿ, ಗ್ರಾಮೀಣ ಪ್ರದೇಶಗಳ ಅವಿದ್ಯಾವಂತ ಜನರಲ್ಲಿ ಇರುವ ಮೂಢನಂಬಿಕೆಯಂತೆ ಅಪಸ್ಮಾರ ಒಂದು ಶಾಪವಲ್ಲ, ಅದು ಸಂಪೂರ್ಣವಾಗಿ ಗುಣಪಡಿಸಲಾಗುವ ಖಾಯಿಲೆ ಎಂದು ಜನಜಾಗೃತಿ ಮೂಡಿಸಿದರು.

ಸ್ಪರ್ಶ ಆಸ್ಪತ್ರೆಯ ಇನ್ನೋರ್ವ ಹಿರಿಯ ನರರೋಗ ಶಾಸ್ತ್ರತಜ್ಞರಾದ ಡಾ। ಬಾಲಾಜಿಯವರು ಅಪಸ್ಮಾರ ರೋಗದ ಮುಖ್ಯ ಕಾರಣಗಳಾದ ಧೀರ್ಘಕಾಲಿಕ ಮದ್ಯಸೇವನೆ, ಅತಿಯಾದ ಧೂಮ್ರಪಾನ, ನಿದ್ರಾಹೀನತೆ, ತಲೆಗೆ ಗಾಯ, ಅನುವಂಶಿಕ ಅಂಶಗಳು, ನಿಯಮಿತ ದೈಹಿಕ ವ್ಯಾಯಾಮದ ಕೊರತೆ, ಪೌಷ್ಟಿಕ ಆಹಾರದ ಕೊರತೆ, ಬದಲಾದ ಜೀವನ ಶೈಲಿ ಎಂದು ಮಾಹಿತಿ ನೀಡಿದರು. ಈ ರೋಗದ ಲಕ್ಷಣಗಳು, ಅಪಾಯಗಳು, ಚಿಕಿತ್ಸಾ ಉಪಾಯಗಳ ಬಗ್ಗೆ ವಿಸ್ತಾರವಾಗಿ ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಈ ಎರಡು ವೈದ್ಯರನ್ನು ಅವರು ವೈದ್ಯಕೀಯ ಕ್ಷೇತ್ರಕ್ಕೆ ಸಲ್ಲಿಸಿದ ಅನುಪಮ ಸೇವೆಯನ್ನು ಪರಿಗಣಿಸಿ ಸನ್ಮಾನಿಸಲಾಯಿತು. ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ವೈದ್ಯಕೀಯ ಅಧೀಕ್ಷಕರಾದ ಡಾ| ಚಕ್ರಪಾಣಿಯವರು ಸಂದರ್ಭೋಚಿತವಾಗಿ ಮಾತನಾಡಿ, ಕಾರ್ಯಾಗಾರಕ್ಕೆ ಶುಭಕೋರಿದರು. ನಗರದ ಖ್ಯಾತ ಲೆಕ್ಕಪರಿಶೋಧಕರಾದ ಎಸ್.ಎಸ್. ನಾಯಕ್‌ರವರು ಗೌರವ ಅತಿಥಿಯಾಗಿ ಪಾಲ್ಗೊಂಡು ವಿವಿಧ ಸಂಸ್ಥೆಗಳಲ್ಲಿ ಹೂಡಿಕೆ ಮತ್ತು ಲಾಭಾಂಶಗಳ ಬಗ್ಗೆ ಅತಿಥಿ ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಮಾಜಿ ಕಾರ್ಯದರ್ಶಿಗಳನ್ನು ಸನ್ಮಾನಿಸಲಾಯಿತು. ಹಾಗೂ ಸಂಸ್ಥೆಯ ಅಗಲಿದ ಮಾಜಿ ಅಧ್ಯಕ್ಷರಾದ ದಿ| ರಾಜೇಶ್ ಬಲ್ಲಾಳ್‌ ರವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.

ವೇದಿಕೆಯಲ್ಲಿ ಸಂಸ್ಥೆಯ ಚುನಾಯಿತ ಅಧ್ಯಕ್ಷ ಡಾ| ಉಲ್ಲಾಸ್ ಶೆಟ್ಟಿ, ಕೋಶಾಧಿಕಾರಿ ಡಾ| ಜ್ಯೂಲಿಯನ್ ಸಲ್ದಾನ್ಹಾ, ವೆನ್‌ಲಾಕ್ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ। ಶಿವಪ್ರಕಾಶ್, ಸ್ಪರ್ಶ ಆಸ್ಪತ್ರೆಯ ಮಾರುಕಟ್ಟೆ ವಿಭಾಗದ ಅಧಿಕಾರಿ ಅಮೃತೇಶ್ ಉಪಸ್ಥಿತರಿದ್ದರು.

ಸಂಸ್ಥೆಯ ಕಾರ್ಯದರ್ಶಿ ಪ್ರಕಾಶ್ ಹರಿಶ್ಚಂದ್ರ ವಂದಿಸಿದರು. ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.