ಅಕ್ಷಯ ಕಾಲೇಜಿನಲ್ಲಿ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ

0
5

ಪುತ್ತೂರು : ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಪ್ಯ ಅಕ್ಷಯ ಕಾಲೇಜಿನಲ್ಲಿ ಐಕ್ಯೂಎಸಿ ಹಾಗೂ ಗ್ರಂಥಾಲಯ ವಿಭಾಗದ ಜಂಟಿ ಸಹಯೋಗದಲ್ಲಿ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ನಡೆಯಿತು.

ಕಾರ್ಯಕ್ರಮವನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬೆಟ್ಟಂಪಾಡಿಯ ಗ್ರಂಥಪಾಲಕ ರಾಮ ಕೆ. ಉದ್ಘಾಟಿಸಿದರು. ಬಳಿಕ ‘A Reading Can Change Your Life’ ವಿಷಯದ ಕುರಿತು ಮಾತನಾಡಿದ ಅವರು, ಮನುಷ್ಯನ ಜೀವನ ಬದಲಾಗುವುದು ಆತನ ಯೋಚನೆಗಳು ಮತ್ತು ಯೋಜನೆಗಳಿಂದ. ಉತ್ತಮ ಯೋಚನೆಗಳು ಮೂಡಲು ಜ್ಞಾನ ಅಗತ್ಯವಾಗಿದ್ದು, ಜ್ಞಾನ ಸಂಪಾದನೆಯ ಮೊದಲ ಹೆಜ್ಜೆ ಓದು ಎಂದರು. ವಿದ್ಯಾರ್ಥಿಗಳು ನಿರಂತರವಾಗಿ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಕ್ಷಯ ಕಾಲೇಜಿನ ಪ್ರಾಂಶುಪಾಲ ಸಂಪತ್ ಪಕ್ಕಳ ಮಾತನಾಡಿ, ವಿದ್ಯಾರ್ಥಿಗಳು ಓದುವ ಅಭ್ಯಾಸವನ್ನು ತಮ್ಮ ಜೀವನದ ಭಾಗವನ್ನಾಗಿ ಮಾಡಿಕೊಳ್ಳಬೇಕು. ಸಾಮಾಜಿಕ ಜಾಲತಾಣಗಳ ಬಳಕೆಯನ್ನು ಮಿತಿಗೊಳಿಸಿ, ಪುಸ್ತಕಗಳೊಂದಿಗೆ ಉತ್ತಮ ಸಂಬಂಧ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿ ಅರ್ಪಿತ್ ಟಿ.ಎ. ಉಪಸ್ಥಿತರಿದ್ದರು. ಐಕ್ಯೂಎಸಿ ಸಂಯೋಜಕಿ ರಶ್ಮಿ ಕೆ. ಮುಖ್ಯ ಅತಿಥಿಯನ್ನು ಪರಿಚಯಿಸಿದರು. ಕಾರ್ಯಕ್ರಮದ ಸಂಯೋಜಕಿ ಪ್ರಭಾವತಿ ಕೆ. ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆಯ ಮಹತ್ವದ ಕುರಿತು ಪ್ರಸ್ತಾವಿಸಿ, ಸರ್ವರನ್ನು ಸ್ವಾಗತಿಸಿದರು.

ಉಪನ್ಯಾಸಕಿ ರಶ್ಮಿತಾ ಧನ್ಯವಾದ ಸಮರ್ಪಿಸಿದರು. ತೃತೀಯ ಬಿ.ಎಫ್.ಡಿ. ವಿಭಾಗದ ದೇವಿಕಾ ಮತ್ತು ಸ್ವರ್ಣ ಪ್ರಾರ್ಥನೆ ನೆರವೇರಿಸಿದರು. ತೃತೀಯ ಬಿಸಿಎ ವಿದ್ಯಾರ್ಥಿನಿ ರಕ್ಷಾ ಕಾರ್ಯಕ್ರಮವನ್ನು ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಪದವಿ ಪ್ರಥಮ ವರ್ಷದ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.