ಮಂಗಳೂರು: ಮಿಲಾಗ್ರಿಸ್ ಕಾಲೇಜಿನಲ್ಲಿ ಸೆ.3ರಂದು ಕನ್ನಡ ಸಾಹಿತ್ಯ–ರಂಗಭೂಮಿ ರಾಷ್ಟ್ರೀಯ ವಿಚಾರ ಸಂಕಿರಣ

0
9

ಮಂಗಳೂರು: ಮಂಗಳೂರಿನ ಮಿಲಾಗ್ರಿಸ್ ಕಾಲೇಜಿನ ಐಕ್ಯೂಎಸಿ, ಭಾಷಾಸಂಗಮ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಕನ್ನಡ ಅಧ್ಯಾಪಕರ ಸಂಘ ‘ವಿಕಾಸ’ದ ಸಹಯೋಗದಲ್ಲಿ ಕನ್ನಡ ಸಾಹಿತ್ಯ ಮತ್ತು ರಂಗಭೂಮಿ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಸೆಪ್ಟೆಂಬರ್ 3ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ.

ಖ್ಯಾತ ರಂಗಕರ್ಮಿ ಹಾಗೂ ರಂಗಾಯಣ ಮೈಸೂರು ನಿರ್ದೇಶಕ ಜನ್ನಿ ಜನಾರ್ಧನ್ ಅವರು ವಿಚಾರ ಸಂಕಿರಣವನ್ನು ಉದ್ಘಾಟಿಸಲಿದ್ದಾರೆ. ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ರೆ. ಫಾ. ಐವನ್ ಮೈಕಲ್ ರೋಡ್ರಿಗಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಡಾ. ಧನಂಜಯ ಕುಂಬ್ಳೆ ಅವರು ಸಂಶೋಧನಾ ಲೇಖನಗಳ ಪುಸ್ತಕವನ್ನು ಬಿಡುಗಡೆಗೊಳಿಸಲಿದ್ದಾರೆ.

ಪಾಂಡಿಚೇರಿ ವಿಶ್ವವಿದ್ಯಾನಿಲಯದ ಪ್ರದರ್ಶನ ಕಲಾ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಪವಿತ್ರ ಅವರು ಆಶಯ ಭಾಷಣ ಮಾಡಲಿದ್ದಾರೆ. ಕ್ರೈಸ್ಟ್ ಅಕಾಡೆಮಿ ಇನ್‌ಸ್ಟಿಟ್ಯೂಟ್ ಆಫ್ ಲಾ, ಹುಲ್ಲಹಳ್ಳಿ, ಬೆಂಗಳೂರಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ. ಮಹೇಶ್ ಎಂ., ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದ ರೆ. ಡಾ. ಆಲ್ವಿನ್ ಸೆರಾವೊ ಹಾಗೂ ‘ವಿಕಾಸ’ದ ಅಧ್ಯಕ್ಷರಾದ ಡಾ. ಚಿನ್ನಸ್ವಾಮಿ ಎನ್. ಉಪಸ್ಥಿತರಿರುವರು.

ವಿಚಾರ ಸಂಕಿರಣದ ಮೊದಲ ಗೋಷ್ಠಿಯಲ್ಲಿ ಮಂಗಳೂರಿನ ರಂಗತಜ್ಞ ಡಾ. ಶ್ರೀಪಾದ ಭಟ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ. ಬಳಿಕ ವಿವಿಧ ಕಾಲೇಜುಗಳ ಅಧ್ಯಾಪಕರು ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಂದ ಸಂಶೋಧನಾ ಪ್ರಬಂಧಗಳ ಮಂಡನೆ ನಡೆಯಲಿದೆ.

ಮಧ್ಯಾಹ್ನ 2 ಗಂಟೆಗೆ ಮಿಲಾಗ್ರಿಸ್ ಕಾಲೇಜಿನ ಅಧ್ಯಾಪಕರಿಂದ ಕಥೆ ಮತ್ತು ಕವನಗಳನ್ನು ಆಧರಿಸಿದ ರಂಗರೂಪ ‘ಮಹಾ ಇಳೆ’ ಪ್ರದರ್ಶನಗೊಳ್ಳಲಿದೆ. ಈ ರಂಗಪ್ರದರ್ಶನವನ್ನು ಸಾರ್ವಜನಿಕರು ವೀಕ್ಷಿಸಲು ಮುಕ್ತ ಅವಕಾಶವಿದೆ.

ನಂತರ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದ ರೆ. ಡಾ. ಆಲ್ವಿನ್ ಸೆರಾವೊ ವಹಿಸಲಿದ್ದಾರೆ. ಕಾಸರಗೋಡಿನ ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ. ಮಾಧವ ಎಂ.ಕೆ. ಅವರು ಸಮಾರೋಪ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಂಆರ್‌ಪಿಎಲ್‌ನ ಮುಖ್ಯ ಪ್ರಧಾನ ವ್ಯವಸ್ಥಾಪಕ ಡಾ. ರುಡಾಲ್ಫ್ ನೊರೋನ್ಹಾ ಉಪಸ್ಥಿತರಿರುವರು ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.