ಬಂಟ್ವಾಳ : ಮಾರ್ನಬೈಲು ಸಮೀಪದ ಸಜಿಪ ಮೂಡ ಗ್ರಾಮದ ಕಂದೂರು–ಪೆಲತ್ತಕಟ್ಟೆ ಬಸ್ ನಿಲ್ದಾಣದ ಬಳಿ ಆಟೋ ರಿಕ್ಷಾ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ.
ಮೃತ ಯುವಕನನ್ನು ನಂದಾವರ–ಸುನ್ನೀ ನಗರ ನಿವಾಸಿ ಮುಹಮ್ಮದ್ ರಾಶಿಕ್ (25) ಎಂದು ಗುರುತಿಸಲಾಗಿದೆ. ಅವಿವಾಹಿತನಾಗಿದ್ದ ರಾಶಿಕ್, ನಂದಾವರ ಶಾಲಾ ಸಮೀಪ ಗ್ಯಾರೇಜ್ ನಡೆಸುತ್ತಿದ್ದರು.
ಭಾನುವಾರ ರಾತ್ರಿ ಸಜಿಪಕ್ಕೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಪೆಲತ್ತಕಟ್ಟೆ ಸಮೀಪ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಶಿವಾಜಿ ಕುಮಾರ್ ಎಂಬವರು ಚಲಾಯಿಸುತ್ತಿದ್ದ ಆಟೋ ರಿಕ್ಷಾ ಬೈಕ್‌ಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.
ಅಪಘಾತದಲ್ಲಿ ರಾಶಿಕ್ ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯಗೊಂಡಿದ್ದರು. ತಕ್ಷಣ ಸ್ಥಳೀಯರು ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿದು ಬಂಟ್ವಾಳ ಸಂಚಾರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

