ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ 3,126 ಕೆಜಿ ಅಕ್ಕಿ ವಿತರಣೆ

0
28

ಉಡುಪಿ : ಆಡಂಬರ ರಹಿತ ಜನ ಸೇವೆಯೇ ಕೃಷ್ಣನ ನಿಜಾರ್ಥದಲ್ಲಿ ಕೃಷ್ಣ ಜನ್ಮಾಷ್ಟಮಿಯ ಆಚರಣೆಯು ಅರ್ಥಪೂರ್ಣ ಎಂದು ಉದ್ಯಮಿ ಕೃಷ್ಣ ಅಂಬಲಪಾಡಿ ನುಡಿದರು. ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಾಲ್ಕು ಅನಾಥಾಶ್ರಮಗಳಿಗೆ ವಿಶು ಶೆಟ್ಟಿ ಅಂಬಲಪಾಡಿ ನೇತೃತ್ವದಲ್ಲಿ ಅನ್ನದಾಸೋಹಕ್ಕೆ ಅಕ್ಕಿ ನೀಡುವ ಕಾರ್ಯಕ್ರಮಕ್ಕೆ ಅಂಬಲಪಾಡಿ ದೇವಸ್ಥಾನದ ಮುಂಬಾಗದಲ್ಲಿ ಚಾಲನೆ ನೀಡಿ ಮಾತನಾಡಿದರು.

ಉಡುಪಿ ನಗರದಲ್ಲಿ ಅಸಹಾಯಕರಾಗಿದ್ದ ನೂರಾರು ಜನರಿಗೆ ಉಡುಪಿ ಸುತ್ತಮುತ್ತಲಿನ ಆಶ್ರಮಗಳು ಆಶ್ರಯ ನೀಡಿದ್ದು ಕೃಷ್ಣ ಜನ್ಮಾಷ್ಟಮಿಯ ಆಚರಣೆಯ ಪ್ರಯುಕ್ತ ಅಕ್ಕಿ ದಾನ ಮಾಡಲಾಗುತ್ತಿದೆ. ಹಿತೈಷಿಗಳ ನೆರವಿನಿಂದ 3126 ಕೆಜಿ ಅಕ್ಕಿ ಸಂಗ್ರಹವಾಗಿದ್ದು, 1,500 ಕೆಜಿ ಹೊಸಬೆಳಕು ಆಶ್ರಮಕ್ಕೆ, 1,000 ಕೆಜಿ ಸ್ವರ್ಗ ಆಶ್ರಮಕ್ಕೆ, ಉಳಿದ ಅಕ್ಕಿಯನ್ನು, ಕಾರುಣ್ಯ ಮತ್ತು ಉಪ್ಪೂರಿನ ಸ್ಪಂದನ ಆಶ್ರಮಕ್ಕೆ ನೀಡಲಾಯಿತು.

ವಿಶು ಶೆಟ್ಟಿ ಅಂಬಲಪಾಡಿ ಮಾತನಾಡಿ, ಬೀದಿಪಾಲಾದಾಗ ರಕ್ಷಿಸುವ ಆಶ್ರಮಗಳಲ್ಲಿಯೂ ಪ್ರಮುಖ ಮೂಲಭೂತ ಕೊರತೆಗಳಿದ್ದು ಇಂತಹ ಆಶ್ರಮಗಳಿಗೆ ಸ್ಪಂದಿಸಿ ನೆರವಾಗುವುದು ಸಮಾಜದ ಕರ್ತವ್ಯ. ಆ ದೃಷ್ಟಿಯಲ್ಲಿ ಕೃಷ್ಣ ಜನ್ಮಾಷ್ಟಮಿಯ ಆಚರಣೆಯನ್ನು ಅನ್ನದಾಸೋಹಕ್ಕೆ ಅಕ್ಕಿ ನೀಡುವ ಮುಖಾಂತರ ಅಳಿಲ ಸೇವೆಯನ್ನು ನೀಡಲಾಗಿದೆ ಎಂದರು. ಕಾರ್ಯಕ್ರಮಕ್ಕೆ ರಾಮದಾಸ್ ಪಾಲನ್ ಉದ್ಯಾವರ ಸಹಕರಿಸಿದರು. ಜಯಂತಿ ಅಂಬಲಪಾಡಿ ಶುಭ ಹಾರೈಸಿದರು.