ವಿಟ್ಲಪಿಂಡಿ ಉತ್ಸವಕ್ಕೆ ಪೊಲೀಸ್​ ಬಂದೋಬಸ್ತ್​

0
83

ಉಡುಪಿ : ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿ ಮಹೋತ್ಸವದ ಅಂಗವಾಗಿ ಸಾರ್ವಜನಿಕರ ಸುರಕ್ಷತೆ, ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸುಗಮ ಸಂಚಾರ ವ್ಯವಸ್ಥೆಯನ್ನು ನಿರ್ವಹಿಸುವ ಉದ್ದೇಶದಿಂದ ವಿಶೇಷ ಬಂದೋಬಸ್ತ್​ ಕೈಗೊಳ್ಳಲಾಗಿದೆ. ನಗರದ ವಿವಿಧ ಪ್ರಮುಖ ಸ್ಥಳಗಳಲ್ಲಿ ಹೆಚ್ಚುವರಿಯಾಗಿ 45 ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಓರ್ವ ಪೊಲೀಸ್​ ಅಧೀಕ್ಷಕರು, ಹೆಚ್ಚುವರಿ ಪೊಲೀಸ್​ ಅಧೀಕ್ಷಕರು, ಇಬ್ಬರು ಡಿವೈಎಸ್ಪಿಗಳು, 6 ಮಂದಿ ಪೊಲೀಸ್​ ಇನ್ಸ್​ಪೆಕ್ಟರ್​ಗಳು, 25 ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​ಗಳು, 35 ಸಹಾಯಕ ಸಬ್​ ಇನ್ಸ್​ಪೆಕ್ಟರ್​ಗಳು, 186 ಹೆಡ್​ ಕಾನ್ಸ್​ಟೇಬಲ್​ ಮತ್ತು ಪೊಲೀಸ್​ ಕಾನ್ಸ್​ಟೇಬಲ್​, ಮಹಿಳಾ ಪೊಲೀಸ್​ ಸಿಬ್ಬಂದಿ ಹಾಗೂ 50 ಗೃಹರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಹೆಚ್ಚುವರಿ ಭದ್ರತೆಗಾಗಿ 1 ಕೆಎಸ್​ಆರ್​ಪಿ ತುಕಡಿ, 9 ಡಿಎಆರ್​ ತುಕಡಿ, 3 ಅಗ್ನಿಶಾಮಕ ದಳದ ತಂಡಗಳು, 2 ಆಂಬ್ಯುಲೆನ್ಸ್​ ಹಾಗೂ 3 ಡ್ರೋನ್​ ತಂಡಗಳನ್ನು ನಿಯೋಜಿಸಲಾಗಿದೆ.

ಪಾರ್ಕಿಂಗ್​ ವ್ಯವಸ್ಥೆ

ಪಾರ್ಕಿಂಗ್​ಗಾಗಿ ಎಂ.ಜಿ.ಎಂ. ಮೈದಾನ, ರಾಜಾಂಗಣ ಪಾರ್ಕಿಂಗ್​ ಸ್ಥಳ, ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನ ಪಾರ್ಕಿಂಗ್​ ಸ್ಥಳ, ಬೀಡಿನಗುಡ್ಡೆ ಮೈದಾನ, ಬೀಡಿನಗುಡ್ಡೆ ಕ್ರೀಡಾಂಗಣ, ವಿದ್ಯೋದಯ ಶಾಲೆ ಪಾರ್ಕಿಂಗ್​ ಸ್ಥಳ, ಮಾಂಡವಿ ರಾಯಲ್​ ಗಾರ್ಡನ್​ ಪಾರ್ಕಿಂಗ್​ ಸ್ಥಳವನ್ನು ಗುರುತಿಸಲಾಗಿದೆ.

ಹಿಂದಿನ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದವರ ಗುರುತಿಸುವಿಕೆಗಾಗಿ ಫಿಂಗರ್​ಪ್ರಿಂಟ್​ ಸ್ಕಾ$ನರ್​ಗಳನ್ನು ಬಳಸಲಾಗುತ್ತಿದ್ದು, ಡ್ರೋನ್​ ಕ್ಯಾಮೆರಾ ಮೂಲಕ ಕಾರ್ಯಕ್ರಮದ ಸಂಪೂರ್ಣ ಪ್ರದೇಶದ ಮೇಲೆ ನಿಗಾ ವಹಿಸಲಾಗುತ್ತಿದೆ.