ಕಾರ್ಕಳ : ಪರಿಶಿಷ್ಟ ಜಾತಿಗೆ ಸೇರಿದ ಆದಿ ದ್ರಾವಿಡ ಸಮುದಾಯವು ಕಾರ್ಕಳ ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಸಮುದಾಯದ ಆರಾಧ್ಯ ಕುಲದೈವವಾದ ಸತ್ಯಸಾರಮಾನಿ (ಕಾನದ ಕಟದ) ದೈವಸ್ಥಾನಗಳು ತಾಲೂಕಿನ ವಿವಿಧ ಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿವೆ. ಈ ದೈವಸ್ಥಾನಗಳ ಅಭಿವೃದ್ಧಿ ಹಾಗೂ ಸಂರಕ್ಷಣೆಗೆ ಸರ್ಕಾರದಿಂದ ಹೆಚ್ಚಿನ ಅನುದಾನ ಒದಗಿಸುವ ಅಗತ್ಯವಿದೆ ಎಂದು ಸುಧಾಕರ್ ದಾನಶಾಲೆ ತಿಳಿಸಿದ್ದಾರೆ.
ಕಾರ್ಕಳ ತಾಲೂಕಿನಲ್ಲಿರುವ ಹಲವು ಸತ್ಯಸಾರಮಾನಿ ದೈವಸ್ಥಾನಗಳು ಸಮುದಾಯದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯ ಪ್ರಮುಖ ಕೇಂದ್ರಗಳಾಗಿವೆ. ಕೆಲವು ದೈವಸ್ಥಾನಗಳು ಹಳೆಯದಾಗಿದ್ದು, ಜೀರ್ಣೋದ್ಧಾರ ಕಾರ್ಯ ಕೈಗೊಳ್ಳಬೇಕಾದ ಅಗತ್ಯವಿದೆ. ಕಟ್ಟಡ ದುರಸ್ತಿ, ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಸರ್ಕಾರದಿಂದ ಅನುದಾನ ದೊರೆತರೆ ದೈವಸ್ಥಾನಗಳ ಅಭಿವೃದ್ಧಿಗೆ ಹೆಚ್ಚಿನ ಸಹಕಾರಿಯಾಗಲಿದೆ ಎಂದರು.
ಕಾರ್ಕಳದ ಶಾಸಕರಾಗಿ ಗೋಪಾಲ ಭಂಡಾರಿ ಅವರು ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಸತ್ಯಸಾರಮಾನಿ ದೈವಸ್ಥಾನಗಳ ಅಭಿವೃದ್ಧಿಗೆ ಕೆಲವು ಅನುದಾನಗಳು ಲಭಿಸಿವೆ. ನಂತರ ವಿ. ಸುನಿಲ್ ಕುಮಾರ್ ಅವರು ಶಾಸಕರಾದ ಬಳಿಕ ಸತ್ಯಸಾರಮಾನಿ ದೈವಸ್ಥಾನಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಅನುದಾನ ದೊರೆತಿದ್ದು, ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗಿದೆ ಎಂದು ಸುಧಾಕರ್ ದಾನಶಾಲೆ ಹೇಳಿದರು.
ಆದರೆ ತಾಲೂಕಿನಲ್ಲಿರುವ ಇನ್ನೂ ಹಲವು ಸತ್ಯಸಾರಮಾನಿ ದೈವಸ್ಥಾನಗಳು ಜೀರ್ಣೋದ್ಧಾರ ಹಾಗೂ ಮೂಲಸೌಕರ್ಯ ಅಭಿವೃದ್ಧಿಯ ಅಗತ್ಯವನ್ನು ಹೊಂದಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ಮುಂದಿನ ದಿನಗಳಲ್ಲಿ ಇಂತಹ ದೈವಸ್ಥಾನಗಳಿಗೆ ಹೆಚ್ಚಿನ ಅನುದಾನವನ್ನು ಮಂಜೂರು ಮಾಡಬೇಕು. ವಿಶೇಷವಾಗಿ ಜೀರ್ಣೋದ್ಧಾರದ ಅಗತ್ಯವಿರುವ ದೈವಸ್ಥಾನಗಳನ್ನು ಗುರುತಿಸಿ ಹಂತ ಹಂತವಾಗಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಸತ್ಯಸಾರಮಾನಿ ಆರಾಧನೆಯು ಆದಿ ದ್ರಾವಿಡ ಸಮುದಾಯದ ಧಾರ್ಮಿಕ ನಂಬಿಕೆ, ಸಂಪ್ರದಾಯ ಮತ್ತು ಸಾಂಸ್ಕೃತಿಕ ಬದುಕಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ಹೀಗಾಗಿ ದೈವಸ್ಥಾನಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳು ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದು ಸುಧಾಕರ್ ದಾನಶಾಲೆ ಅಭಿಪ್ರಾಯಪಟ್ಟರು.

