ಹೆಬ್ರಿ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಕೂಟ: ಅಮೃತಭಾರತಿ ಬಾಲಕಿಯರ ತಂಡಕ್ಕೆ ಪ್ರಥಮ, ಬಾಲಕರಿಗೆ ದ್ವಿತೀಯ

0
26

ಹೆಬ್ರಿ: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ವತಿಯಿಂದ ಸರ್ಕಾರಿ ಪದವಿಪೂರ್ವ ಕಾಲೇಜು ಹೆಬ್ರಿಯಲ್ಲಿ ಆಯೋಜಿಸಲಾಗಿದ್ದ ಹೆಬ್ರಿ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಕೂಟದಲ್ಲಿ ಪಿ.ಆರ್.ಎನ್. ಅಮೃತಭಾರತಿ ಪದವಿಪೂರ್ವ ಕಾಲೇಜು, ಹೆಬ್ರಿಯ ಬಾಲಕಿಯರ ತಂಡ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟದ ಪಂದ್ಯಾಕೂಟಕ್ಕೆ ಆಯ್ಕೆಯಾಗಿದೆ. ಕಾಲೇಜಿನ ಬಾಲಕರ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ.

ಪಂದ್ಯಾಕೂಟದಲ್ಲಿ ಅಮೃತಭಾರತಿ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ತಂಡಸ್ಫೂರ್ತಿ ಹಾಗೂ ಕ್ರೀಡಾ ಕೌಶಲ್ಯ ಪ್ರದರ್ಶಿಸಿ ಗಮನ ಸೆಳೆದರು. ಬಾಲಕಿಯರ ತಂಡದ ಉತ್ತಮ ಪ್ರದರ್ಶನದ ಫಲವಾಗಿ ಜಿಲ್ಲಾಮಟ್ಟಕ್ಕೆ ಅರ್ಹತೆ ಗಳಿಸಿದ್ದು, ಕಾಲೇಜಿಗೆ ಹೆಮ್ಮೆ ತಂದಿದೆ.

ವೈಯಕ್ತಿಕ ವಿಭಾಗದಲ್ಲಿ ಬಾಲಕರ ವಿಭಾಗದಲ್ಲಿ ನಿಯತ್ ಅವರು ಬೆಸ್ಟ್ ಆಲ್‌ರೌಂಡರ್ ಪ್ರಶಸ್ತಿ ಪಡೆದುಕೊಂಡರೆ, ಬಾಲಕಿಯರ ವಿಭಾಗದಲ್ಲಿ ಅವನಿ ಅವರು ಬೆಸ್ಟ್ ಆಲ್‌ರೌಂಡರ್ ಹಾಗೂ ಮೋಕ್ಷ ಅವರು ಬೆಸ್ಟ್ ಅಟ್ಯಾಕರ್ ಪ್ರಶಸ್ತಿಗೆ ಭಾಜನರಾದರು.

ವಿಜೇತ ವಿದ್ಯಾರ್ಥಿಗಳನ್ನು ತರಬೇತಿಗೊಳಿಸಿದ ದೈಹಿಕ ಶಿಕ್ಷಕಿ ಪಾವನ ಶೆಟ್ಟಿ ಅವರ ಪರಿಶ್ರಮವನ್ನು ಆಡಳಿತ ಮಂಡಳಿ ಹಾಗೂ ಕಾಲೇಜಿನ ಪ್ರಾಂಶುಪಾಲರು, ಶಿಕ್ಷಕರು ಅಭಿನಂದಿಸಿದರು. ಜಿಲ್ಲಾಮಟ್ಟದ ಪಂದ್ಯಾಕೂಟದಲ್ಲಿಯೂ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿ ಕಾಲೇಜಿಗೆ ಕೀರ್ತಿ ತರಲಿ ಎಂದು ಶುಭ ಹಾರೈಸಿದರು.