ಉಪ್ಪಿನಂಗಡಿ : ಪೆರ್ನೆ ಸಮೀಪದ ಮನೆಯೊಂದರಲ್ಲಿ ಮಹಿಳೆಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದ್ದು, ಸ್ಥಳೀಯರಲ್ಲಿ ಆತಂಕ ಹಾಗೂ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಮೃತರನ್ನು ಕಾವ್ಯ ಎಂದು ಗುರುತಿಸಲಾಗಿದೆ. ಮನೆಯೊಳಗೆ ಮಹಿಳೆಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೃತದೇಹದ ಸ್ಥಿತಿ ಹಾಗೂ ಕಾಲಿನ ಭಾಗ ನೆಲಕ್ಕೆ ತಾಗಿಕೊಂಡಿದ್ದ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿವೆ. ಹೀಗಾಗಿ ಇದು ಆತ್ಮಹತ್ಯೆಯೇ ಅಥವಾ ಬೇರೆ ಯಾವುದೇ ಕಾರಣದಿಂದ ಸಂಭವಿಸಿದ ಸಾವೇ ಎಂಬ ಪ್ರಶ್ನೆ ಮೂಡಿದೆ.
ಕಾವ್ಯ ಅವರಿಗೆ ಇಬ್ಬರು ಮಕ್ಕಳಿದ್ದು, ಇತ್ತೀಚೆಗಷ್ಟೇ ಅವರ ಪುತ್ರಿಯ ವಿವಾಹ ನೆರವೇರಿತ್ತು ಎನ್ನಲಾಗಿದೆ. ಇದೀಗ ಪುತ್ರ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ಘಟನೆ ತಿಳಿದು ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ವರದಿ ಹಾಗೂ ಪೊಲೀಸ್ ತನಿಖೆಯ ಬಳಿಕವಷ್ಟೇ ಸಾವಿನ ನಿಖರ ಕಾರಣ ತಿಳಿದುಬರಬೇಕಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ. ಸಾವಿನ ಸಂದರ್ಭ, ಘಟನಾ ಸ್ಥಳದ ಪರಿಸ್ಥಿತಿ ಹಾಗೂ ಲಭ್ಯವಿರುವ ಸಾಕ್ಷ್ಯಗಳನ್ನು ಆಧರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

