ಸೆ.5ರಂದು ಹೆಬ್ರಿಯಲ್ಲಿ ಅದ್ದೂರಿ ಶ್ರೀಕೃಷ್ಣ ಜನ್ಮಾಷ್ಠಮಿ ಶೋಭಾಯಾತ್ರೆ

0
20

ಹೆಬ್ರಿ: ಭಗವಾನ್ ಶ್ರೀಕೃಷ್ಣನ ಜನ್ಮಾಷ್ಟಮಿಯ ಪಾವನ ಸಂದರ್ಭದಲ್ಲಿ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಯ ವತಿಯಿಂದ ಸೆಪ್ಟೆಂಬರ್ 5ರಂದು ಹೆಬ್ರಿಯಲ್ಲಿ ಭವ್ಯ ಶ್ರೀಕೃಷ್ಣ ಶೋಭಾಯಾತ್ರೆ ಆಯೋಜಿಸಲಾಗಿದೆ.

ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ವಿದ್ಯಾಲಯ (State), ಅಮೃತ ಭಾರತಿ ವಿದ್ಯಾಕೇಂದ್ರ (CBSE) ಹಾಗೂ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನ 2500ಕ್ಕೂ ಅಧಿಕ ವಿದ್ಯಾರ್ಥಿಗಳು ಶೋಭಾಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಶನಿವಾರ ಬೆಳಿಗ್ಗೆ 10 ಗಂಟೆಗೆ ವಿವಿಧ ಮೂರು ಸ್ಥಳಗಳಿಂದ ಏಕಕಾಲದಲ್ಲಿ ಶೋಭಾಯಾತ್ರೆ ಆರಂಭವಾಗಲಿದೆ.

ಶ್ರೀ ಅನಂತಪದ್ಮನಾಭ ದೇವಸ್ಥಾನ ಹೆಬ್ರಿ, ಬಂಟರ ಭವನ ಆಗುಂಬೆ ರಸ್ತೆ ಹಾಗೂ ಶ್ರೀ ಗಜಾನನ ಗೇರುಬೀಜ ಕಾರ್ಖಾನೆ, ಕುಚ್ಚೂರು ರಸ್ತೆ ಇಲ್ಲಿಂದ ಪ್ರತ್ಯೇಕವಾಗಿ ಹೊರಡುವ ಮೂರು ಮೆರವಣಿಗೆಗಳು ಹೆಬ್ರಿ ಪೇಟೆಯ ಮುಖ್ಯ ವೃತ್ತದಲ್ಲಿ ಒಂದಾಗಿ ಸೇರಿ ಮುಂದುವರಿಯಲಿವೆ.

ಹೆಬ್ರಿ ಮುಖ್ಯ ವೃತ್ತದಲ್ಲಿ ವಿಶೇಷವಾಗಿ ಮೊಸರು ಕುಡಿಕೆ ಉತ್ಸವ ನೆರವೇರಿಸಲಿದ್ದು, ಬಳಿಕ ಭವ್ಯ ಶೋಭಾಯಾತ್ರೆಯು ಅಮೃತ ಭಾರತಿ ಕ್ರೀಡಾಂಗಣದತ್ತ ಸಾಗಲಿದೆ.

ಶೋಭಾಯಾತ್ರೆ ಅಮೃತ ಭಾರತಿ ಕ್ರೀಡಾಂಗಣ ತಲುಪಿದ ಬಳಿಕ ಅಲ್ಲಿ ವಿವಿಧ ಚಿತ್ತಾಕರ್ಷಕ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ನೃತ್ಯ, ಹುಲಿವೇಷ, ಯಕ್ಷಗಾನ, ಭಜನೆ, ಕೋಲಾಟ, ಜಾಗಟೆ, ಶಂಖನಾದ, ಮೊಸರು ಕುಡಿಕೆ ಸೇರಿದಂತೆ ಹಲವು ಕಾರ್ಯಕ್ರಮಗಳು ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲಿವೆ.

ಶೋಭಾಯಾತ್ರೆಯಲ್ಲಿ ಪುಟ್ಟ ಕೃಷ್ಣ, ಬಲರಾಮ, ಗೋಪಿ ಹಾಗೂ ರಾಧೆಯ ವೇಷಧಾರಿಗಳಾಗಿ ವಿದ್ಯಾರ್ಥಿಗಳು ಭಾಗವಹಿಸಲಿದ್ದು, ಹೆಬ್ರಿಯ ನಾಗರಿಕರು ಶ್ರೀಕೃಷ್ಣ ದೇವರ ಭಾವಚಿತ್ರಕ್ಕೆ, ಭಗವದ್ಧ್ವಜಕ್ಕೆ ಹಾಗೂ ವೇಷಧಾರಿ ವಿದ್ಯಾರ್ಥಿಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಶೋಭಾಯಾತ್ರೆಯನ್ನು ಆತ್ಮೀಯವಾಗಿ ಸ್ವಾಗತಿಸುವಂತೆ ಅಮೃತ ಭಾರತಿ ಪರಿವಾರ ವಿನಂತಿಸಿದೆ.

ಶ್ರೀಕೃಷ್ಣ ಜನ್ಮಾಷ್ಟಮಿಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದರ ಜೊತೆಗೆ, ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಹಾಗೂ ಹೆಬ್ರಿಯ ನಾಗರಿಕ ಬಂಧುಗಳು ಭಾಗವಹಿಸಿ ಶೋಭಾಯಾತ್ರೆಯ ಸಂಭ್ರಮವನ್ನು ಹೆಚ್ಚಿಸುವಂತೆ ಅಮೃತ ಭಾರತಿ ಟ್ರಸ್ಟ್‌ನ ಆಡಳಿತ ಮಂಡಳಿ ಮುಕ್ತ ಆಮಂತ್ರಣ ನೀಡಿದೆ.